ಬೆಂಗಳೂರು: ನಾಳೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯಲಿರುವ ಚುನಾವಣಾ ಆಯೋಗ ವಿರುದ್ಧ ಮತಗಳ್ಳತನ ಪ್ರತಿಭಟನೆಯಲ್ಲಿ ಭಾಗವಹಿಸಲು ಇಂದು ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಮುಖ್ಯಮಂತ್ರಿಗಳು ಬಂದು ಭಾಗಿಯಾಗುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾವೆಲ್ಲರೂ 'ವೋಟ್ ಚೋರಿ' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ನಮ್ಮಲ್ಲಿಂದ 100ಕ್ಕೂ ಹೆಚ್ಚು ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು ಹಾಜರಾಗುವಂತೆ ನಾವು ಕೇಳಿಕೊಂಡಿದ್ದೇವೆ, ಇದು ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಿರುತ್ತದೆ ಎಂದರು.
ಕರ್ನಾಟಕದಲ್ಲಿ ಮೊದಲು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಿಂದ ಈ ಮಹಾನ್ ಚಳವಳಿ ಪ್ರಾರಂಭವಾಯಿತು. ನಾವು ಮತದಾನದ ಹಕ್ಕಿಗಾಗಿ ಹೋರಾಡುತ್ತೇವೆ. ಕಾಂಗ್ರೆಸ್ ಪಕ್ಷವು ಯಾವಾಗಲೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪರವಾಗಿ ನಿಂತಿದೆ. ಇಲ್ಲಿ ಪ್ರತಿಯೊಬ್ಬ ನಾಗರಿಕನ ಮತವು ಮುಖ್ಯವಾಗಿದೆ, ಆದ್ದರಿಂದ ಮತದಾರರ ಮತರಕ್ಷಣೆಗಾಗಿ ನಮ್ಮ ಹೋರಾಟವಾಗಿದೆ ಎಂದರು.
ಹೈಕಮಾಂಡ್ ಭೇಟಿ ಮಾಡುವ ಯಾವುದೇ ಉದ್ದೇಶವಿಲ್ಲ, ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ನನಗೆ ಬಂದಿರುವ ನೊಟೀಸ್ ಗೆ ದೆಹಲಿ ಪೊಲೀಸರಿಗೆ ಉತ್ತರ ಕೊಡಬೇಕಾಗಿದೆ ಎಂದರು.