ಬೆಂಗಳೂರು: ಇಮೇಲ್, ವಾಟ್ಸಾಪ್, ಎಸ್‌ಎಂಎಸ್‌ಗಳ ಈ ಯುಗದಲ್ಲಿ, ಭಾರತೀಯ ಅಂಚೆ ಇಲಾಖೆ ಬೆಂಗಳೂರು ನಗರದಲ್ಲಿ ತನ್ನ 'ಜೆನ್ ಝೀ'(Gen Z) ಅಂಚೆ ಕಚೇರಿಗಳನ್ನು ತೆರೆದು ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಲು ನಿರ್ಧರಿಸಿದೆ.
ಮೊದಲಿಗೆ, ಈ ಅಂಚೆ ಕಚೇರಿಗಳು ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾಲಯ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದಲ್ಲಿ ಬರಲಿವೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪ್ರತಿನಿಧಿ ಜೊತೆ ಮಾತನಾಡಿದ ಬೆಂಗಳೂರು ಪಶ್ಚಿಮ ವಿಭಾಗದ ಅಂಚೆ ಕಚೇರಿಯ ಸಹಾಯಕ ಅಧೀಕ್ಷಕ ಹರ್ಷ ಎಂಆರ್, ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಮೊದಲ 'ಜೆನ್ ಝೀ' ಅಂಚೆ ಕಚೇರಿ ಇಂದು ಉದ್ಘಾಟನೆಗೊಳ್ಳಲಿದೆ.
ಇದನ್ನು ಅಧಿಕೃತವಾಗಿ ''ಜೆನ್ ಝೀ' ಅಂಚೆ ಕಚೇರಿ, ಅಚಿತ್ ನಗರ, ಬೆಂಗಳೂರು ಪಿನ್‌ಕೋಡ್- 560107' ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಥೆಯ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ವಿನ್ಯಾಸಗೊಳಿಸಿದ್ದಾರೆ. ವಿವಿಧ ಗೀಚುಬರಹಗಳೊಂದಿಗೆ ಚಿತ್ರಿಸಿದ್ದಾರೆ. ಅಂಚೆ ಸೇವೆಗಳನ್ನು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಕ್ಯಾಂಪಸ್ ಸಮುದಾಯಕ್ಕೆ ಹತ್ತಿರ ತರುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದರು.
ಜೆನ್ ಝೀ ಅಂಚೆ ಕಚೇರಿಯಲ್ಲಿ, ನಾವು ಎರಡು ವಿಭಾಗಗಳನ್ನು ಪರಿಚಯಿಸಿದ್ದೇವೆ. ಒಂದು ವಿಭಾಗದಲ್ಲಿ, ವಿದ್ಯಾರ್ಥಿಗಳು ನಮ್ಮ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಬಂದು ಉತ್ತಮ ಅನುಭವವನ್ನು ಪಡೆಯಬಹುದು, ಇಂಡಿಯಾ ಪೋಸ್ಟ್ ಅಡಿಯಲ್ಲಿ ಲಭ್ಯವಿರುವ ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು. ಇನ್ನೊಂದು ವಿಭಾಗದಲ್ಲಿ, ಅವರು ನಮ್ಮೊಂದಿಗೆ ಅರೆಕಾಲಿಕವಾಗಿ ಕೆಲಸ ಮಾಡಬಹುದು, ಅವರಿಗೆ ಪ್ರೋತ್ಸಾಹ ಧನ ನೀಡಲಾಗುವುದು, ಇದು ಇನ್ನೂ ಪ್ರಸ್ತಾವನೆಯಲ್ಲಿದೆ, ಕಾರ್ಯರೂಪಕ್ಕೆ ಬರಬೇಕಿದೆ ಎಂದರು.
ಕ್ಯಾಂಪಸ್‌ಗಳಾದ್ಯಂತ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಅವರು ಸೇವೆಗಳನ್ನು ಬಳಸಬಹುದು. ಇತರ ಅಂಚೆ ಕಚೇರಿಗಳಿಗಿಂತ ಭಿನ್ನವಾಗಿ, ಇದು ಭೌತಿಕ ಮತ್ತು ಡಿಜಿಟಲ್ ಪ್ರಪಂಚದ ಮಿಶ್ರಣವಾಗಿದ್ದು, ವಿದ್ಯಾರ್ಥಿಗಳಿಗೆ ವೈಫೈ ಸೇವೆಗಳು, ಹವಾನಿಯಂತ್ರಿತ ಕೊಠಡಿಗಳು ಮತ್ತು ಜನರೇಷನ್ ಝಡ್ ಬಳಸಲು ಇಷ್ಟಪಡುವ ಕಾಫಿ ವೆಂಡಿಂಗ್ ಯಂತ್ರಗಳನ್ನು ಸಹ ನೀಡುತ್ತದೆ.
ಕ್ಯಾಂಪಸ್‌ನೊಳಗಿನ ಅಂಚೆ ಕಚೇರಿಗಳಲ್ಲಿ ಕೆಲಸ ಮಾಡುವ ಕ್ಯಾಂಪಸ್‌ನ ಉಸ್ತುವಾರಿ ವಹಿಸುವ ವಿದ್ಯಾರ್ಥಿ ಪ್ರತಿನಿಧಿಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಹರ್ಷ ಹೇಳಿದರು.
ಒಂದು ರೋಸ್ಟರ್ ನ್ನು ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ವಿವಿಧ ಸೇವಾ ಕೌಂಟರ್‌ಗಳಲ್ಲಿ ಸೇವೆ ಸಲ್ಲಿಸಲು ಕಾರ್ಯಗಳನ್ನು ನೀಡಲಾಗುತ್ತದೆ. ಹಿರಿಯ ಪೋಸ್ಟ್ ಮಾಸ್ಟರ್ ಜನರೇಷನ್ ಝಡ್ ಅಂಚೆ ಕಚೇರಿಗಳ ಉಸ್ತುವಾರಿ ವಹಿಸಿರುತ್ತಾರೆ, ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ.
ಬೆಂಗಳೂರಿನ ಉತ್ತರ, ದಕ್ಷಿಣ ಮತ್ತು ಪೂರ್ವದ ಇತರ ಮೂರು ವಿಭಾಗಗಳಲ್ಲಿ ಜನರೇಷನ್ ಝಡ್ ಅಂಚೆ ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು ಇಂಡಿಯಾ ಪೋಸ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.