ಬೆಳಗಾವಿ: ರಾಜ್ಯದ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳಿವೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಕರ ವರದಿ ಬಹಿರಂಗಪಡಿಸಿದೆ.
ಯೋಜನೆ, ಸಿಬ್ಬಂದಿ ನೇಮಕ, ಮೂಲಸೌಕರ್ಯ ಹಾಗೂ ನಿಧಿ ಬಳಕೆಯಲ್ಲಿ ಅನೇಕ ಲೋಕಗಳಿವೆ ಎಂದು ವರದಿ ತಿಳಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.
ಪ್ರಾಕೃತಿಕ ವಿಪತ್ತುಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ವಿಪತ್ತು ಅಪಾಯ ನಿರ್ವಹಣೆಯ ಸಿದ್ಧತೆಯನ್ನು ಸಿಎಜಿ ಪರಿಶೀಲಿಸಿದೆ.
2017–18ರಿಂದ 2022–23ರ ಅವಧಿಯ ಕರ್ನಾಟಕದ ವಿಪತ್ತು ನಿರ್ವಹಣಾ ಸಿದ್ಧತೆಯನ್ನು ಸಿಎಜಿ ಪರಿಶೀಲಿಸಿದ್ದು, 2008ರಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಥಾಪನೆಯಾದರೂ, ರಾಜ್ಯ ವಿಪತ್ತು ನಿರ್ವಹಣಾ ನೀತಿಯನ್ನು 12 ವರ್ಷಗಳ ನಂತರ ಮಾತ್ರ ಅಧಿಸೂಚನೆ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ (State Emergency Operation Centre) ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯದ ಕೊರತೆಯಿದ್ದು, ಇದು ವ್ಯವಸ್ಥೆಯ ಕಾರ್ಯಕ್ಷಮತೆ ಮೇಲೆ ದುಷ್ಪರಿಣಾಮ ಬೀರಿದೆ. ವಿಪತ್ತು ಪ್ರತಿಕ್ರಿಯಾ ಪಡೆಗಳಲ್ಲೂ (Disaster Response Force) ತೀವ್ರ ಸಿಬ್ಬಂದಿ ಕೊರತೆ ಕಂಡುಬಂದಿದ್ದು, ಮಂಜೂರಾದ ಹುದ್ದೆಗಳ ಪೈಕಿ ಶೇ.67ರಿಂದ ಶೇ.96 ಹುದ್ದೆಗಳು ಖಾಲಿಯಾಗಿವೆ.
2009ರಿಂದ 2015ರ ಅವಧಿಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾವಹಿಸುವ ಕೇಂದ್ರ (KSNDMC) ಸ್ಥಾಪಿಸಿದ್ದ ಟೆಲಿಮೆಟ್ರಿಕ್ ಮಳೆ ಮಾಪಕಗಳು (TRG) ಮತ್ತು ಟೆಲಿಮೆಟ್ರಿಕ್ ಹವಾಮಾನ ಕೇಂದ್ರಗಳು (TWS) ಬಹುತೇಕ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿವೆ ಎಂದು ಸಿಎಜಿ ತಿಳಿಸಿದೆ.
ನಿಧಿ ನಿರ್ವಹಣೆಯಲ್ಲೂ ಗಂಭೀರ ಲೋಪಗಳು ಕಂಡುಬಂದಿವೆ. ರಾಜ್ಯದಿಂದ ಬಿಡುಗಡೆಯಾದ ನಿಧಿಗಳು ನಿರ್ದಿಷ್ಟ ವಿಪತ್ತುಗಳಿಗೆ ಸಂಬಂಧಿಸಿರದೆ ಇರುವುದರಿಂದ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಅನುದಾನಗಳ ಮೇಲ್ವಿಚಾರಣೆ ಕಷ್ಟಕರವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಚಿಂತಾಮಣಿ ತಾಲೂಕು ತಹಸೀಲ್ದಾ ಕಚೇರಿಯಲ್ಲಿ 2017-18ರಲ್ಲಿ ಕಚೇರಿ ಸಹಾಯಕನೊಬ್ಬ 59 ಚೆಕ್‌ಗಳಿಗೆ ತಹಸೀಲ್ದಾರ್ ಸಹಿ ನಕಲು ಮಾಡಿ ರೂ.18.59 ಲಕ್ಷ ದುರುಪಯೋಗ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಕುರಿತಂತೆ ಪೊಲೀಸರಿಗೆ ದೂರು ದಾಖಲಾಗಿದ್ದರೂ, ಮುಂದೆ ಯಾವುದೇ ಸಮರ್ಪಕ ಕ್ರಮವಾಗಿಲ್ಲ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಅಲ್ಲದೆ, ಹಾವೇರಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಪತ್ತುಗಳಿಗೆ ಸಂಬಂಧಿಸದ ಕಾರ್ಯಗಳಿಗೆ ರೂ.1.81 ಕೋಟಿ SDRF ನಿಧಿಯಲ್ಲೂ ಲೋಪಗಳಾಗಿರುವುದು ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗಿದೆ.
ಪರಿಹಾರಧನ ವಿತರಣೆಯಲ್ಲೂ ಲೋಪಗಳು ಕಂಡುಬಂದಿವೆ. ಹಾನಿಗೆ ನೀಡಲಾಗುವ ಪರಿಹಾರದಲ್ಲಿ ವ್ಯತ್ಯಾಸಗಳು ಹಾಗೂ ಸಮರ್ಪಕ ಪರಿಶೀಲನೆಯ ಕೊರತೆಯಿದೆ ಎಂದು ಸಿಎಜಿ ತಿಳಿಸಿದೆ.
ರೂ.213.94 ಕೋಟಿ ಮೊತ್ತ ಬಿಡುಗಡೆಗೊಂಡಿದ್ದರೂ 22,496 ಮನೆ ಹಾನಿ ಪುನರ್‌ನಿರ್ಮಾಣ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ ಎಂದು ವರದಿ ಹೇಳಿದೆ.
ಇದೇ ವೇಳೆ ಸಿಎಜಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸುಧಾರಣೆ, ಅಧಿಕಾರಿಗಳಿಗೆ ಉತ್ತಮ ತರಬೇತಿ, ಬರ ನಿವಾರಣಾ ಮಾರ್ಗಸೂಚಿಗಳ ರೂಪಣೆ, ಭೂಗರ್ಭ ಜಲ ನಿಯಂತ್ರಣ ಕಾನೂನುಗಳ ಅನುಷ್ಠಾನ, ಸಮಗ್ರ ಭೂಕುಸಿತ ತಡೆ ಯೋಜನೆ ಹಾಗೂ ವಿಪತ್ತು ಅಪಾಯ ಕಡಿತ ಯೋಜನೆಗಳ ಪರಿಣಾಮಕಾರಿ ಜಾರಿಗಾಗಿ ಶಿಫಾರಸು ಮಾಡಿದೆ.