ಬೆಳಗಾವಿ: ಕೋಲಾರ ತಾಲೂಕಿನ ಹಳ್ಳಿಯೊಂದರಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ವಿಧಾನಸಭೆಯಲ್ಲಿ ಶುಕ್ರವಾರ ಸ್ವಯಂ ಪ್ರೇರಣೆಯಿಂದ ಹೇಳಿಕೆ ನೀಡಿದ ಕೃಷ್ಣಬೈರೇಗೌಡ, ಸರ್ಕಾರಿ ಜಾಗ ಒತ್ತುವರಿ ಆರೋಪಗಳನ್ನು ನಿರಾಕರಿಸಿದರು. ಅಲ್ಲಿನ ಸಂಪೂರ್ಣ ಆಸ್ತಿ ತಮ್ಮ ಕುಟುಂಬಕ್ಕೆ ಸೇರಿದ್ದು ಎಂದರು.
ಕೋಲಾರ ತಾಲೂಕಿನ ಗರುಡಪಾಳ್ಯ ಪಾಳ್ಯದಲ್ಲಿ ಒತ್ತುವರಿ ಆರೋಪದಲ್ಲಿ ರಾಜಕೀಯವಾಗಿ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಕಳೆದ ಎರಡು ಮೂರು ದಿನಗಳಿಂದ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ನನ್ನ ಹೆಸರನ್ನೂ ತಳಕು ಹಾಕಿ ನಾನೇ ಒತ್ತುವರಿ ಮಾಡಿದ್ದೇನೆ ಎಂದೂ ಆರೋಪಿಸಲಾಗಿದೆ. ಆದರೆ ಯಾವುದೇ ಒತ್ತುವರಿ ಆಗಿಲ್ಲ. ಅಲ್ಲಿನ ಸಂಪೂರ್ಣ ಆಸ್ತಿ ನಮ್ಮ ತಾತ ಚೌಡೇಗೌಡರಿಗೆ ಸೇರಿದ್ದು ಎಂದು ಸ್ಪಷ್ಪಪಡಿಸಿದರು. ಕೃಷ್ಣಬೈರೇಗೌಡ 21 ಎಕರೆ ಭೂಮಿ ಕಬಳಿಸಿದ್ದಾರೆ ಎಂದು ಬಿಜೆಪಿ ಬುಧವಾರ ಆರೋಪಿಸಿತ್ತು.
ಗರಡುಪಾಳ್ಯ ಗ್ರಾಮವು ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ್ದ ಗ್ರಾಮ. 1923ರಲ್ಲಿ ಮಹರಾಜರು ಖರೀದಿದ್ದರು. ಅವರು ಅಲ್ಲಿ ಕೃಷಿ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದರು. ರಸಾಯನಿಕ ಗೊಬ್ಬರವನ್ನ ಹೊರದೇಶದಿಂದ ಆಮದು ಮಾಡಿ, ಇಲ್ಲಿ ರೈತರಿಗೆ ಪರಿಚಯ ಮಾಡಿಸುವ ಕೇಂದ್ರವನ್ನಾಗಿ ನಡೆಸಲಾಗುತ್ತಿತ್ತು. ಇದುಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟ್ರಸ್ಟ್‌ಗೆ ಸೇರಿದ ಜಮೀನು. ಇದರ ವ್ಯವಹಾರವನ್ನು ಮಹಾರಾಜರ ಸೆಕ್ರೆಟರಿ ನಾರಾಯಣ ಸ್ವಾಮಿ ನೋಡಿಕೊಳ್ಳುತ್ತಿದ್ದರು. ಅದನ್ನು ಆ ನಾರಾಯಣ ಸ್ವಾಮಿ ಅವರು 1953ರಲ್ಲಿ ನಮ್ಮ ತಾತ ಚೌಡೇಗೌಡರಿಗೆ 10 ವರ್ಷಗಳ ಭೋಗ್ಯಕ್ಕೆ ನೀಡಿದ್ದರು ಎಂದು ವಿವರಿಸಿದ್ದಾರೆ.
ಭೋಗ್ಯದ ಅವಧಿ ಮುಗಿಯುವುದಕ್ಕೂ ಮೊದಲೇ ರಾಜಮನೆತನದವರು ಆ ಭೂಮಿಯನ್ನು ಮಾರಾಟಕ್ಕೆ ಇಟ್ಟರು. ಆದರೆ ಚೌಡೇಗೌಡರು ಸರಿಯಾದ ಸಮಯಕ್ಕೆ ಹಣ ಹೊಂದಿಸಲಾಗಲಿಲ್ಲ. ಆದ್ದರಿಂದ, ಜಮೀನನ್ನು 1959ರಲ್ಲಿ ಅಬೀಬುಲ್ಲಾ ಖಾನ್ ಅವರಿಗೆ ಮಾರಾಟ ಮಾಡಿದರು. ಅದರ ವಿರುದ್ಧ ನಮ್ಮ ತಾತ ಕೋಲಾರ ವಿಶೇಷ ಜಿಲ್ಲಾಧಿಕಾರಿಗೆ ದೂರು ದಾಖಲಿದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಅಬೀಬುಲ್ಲಾ ಖಾನ್ ಅವರೇ ಭೂಮಿ ಮಾಲೀಕರು ಎಂಬುದಾಗಿ ಆದೇಶ ನೀಡಿದ್ದರು. ಆದೇಶದಲ್ಲಿ, ‘ಗರಡುಪಾಳ್ಯ ಎಂಬ ಇಡೀ ಹಳ್ಳಿಯು ಒಬ್ಬ ಮಾಲೀಕನಿಗೆ ಸೇರಿದ್ದು. ಯಾರೂ ವಾಸ ಮಾಡದೇ ಇರುವ ‘ಬೇಚರಾಗ್’ ಗ್ರಾಮ. ಈ ಹಳ್ಳಿಯು ಶ್ರೀಕಂಠದತ್ತ ಒಡೆಯರ್ ಟ್ರಸ್ಟ್‌ಗೆ ಸೇರಿದ್ದಾಗಿದ್ದು, 1953ರಲ್ಲಿ ಇಡೀ ಹಳ್ಳಿಯನ್ನು ರಾಜಮನೆತನವು ಭೋಗ್ಯಕ್ಕೆ ನೀಡಿತ್ತು. ಬಳಿಕ ಅಬೀಬುಲ್ಲಾ ಖಾನ್ ಅವರಿಗೆ 47,601 ರೂ. ಮಾರಾಟ ಮಾಡಿದೆ ಎಂಬುದಾಗಿ ಬರೆಯಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಶೇಷ ಜಿಲ್ಲಾಧಿಕಾರಿಯ ಆದೇಶವನ್ನು ಪ್ರಶ್ನಿಸಿ ಮೈಸೂರ್ ಅಪಿಲೇಟ್ ಟ್ರಿಬ್ಯೂನಲ್‌ನಲ್ಲಿ ಚೌಡೇಗೌಡರು ಮೇಲ್ಮನವಿ ದಾಖಲಿಸಿದರು. ಆಗ, ಅಬೀಬುಲ್ಲಾ ಖಾನ್ ಅವರು ಒಪ್ಪಂದಕ್ಕೆ ಬಂದರು. ಗ್ರಾಮದ ಸಂಪೂರ್ಣ 256 ಎಕರೆ ಒಡೆತನವನ್ನು ಚೌಡೇಗೌಡರಿಗೆ ಬಿಟ್ಟುಕೊಟ್ಟರು. ಇದೆಲ್ಲವೂ ‘ಸೇಲ್ ಡೀಡ್’ (ಕ್ರಯ)ದಲ್ಲಿ ಸ್ಪಷ್ಟವಾಗಿದೆ. ಅಂದಿನಿಂದ ಈವರೆಗೆ ನಮ್ಮ ಕುಟುಂಬವು ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದೆ” ಎಂದು ತಿಳಿಸಿದ್ದಾರೆ.
“ಈ ಜಮೀನಿನಲ್ಲಿ ಎರಡು ಕೆರೆಗಳಿವೆ. ಆ ಕಾರಣಕ್ಕಾಗಿಯೇ, ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಆ ಕೆರೆಗಳ ಭೂಮಿಯು ನಮ್ಮ ಕುಟುಂಬದ ಹೆಸರಿನಲ್ಲಿದೆ. ಆದರೆ, ಆ ಕೆರೆಗೆಳು ಅಸ್ತಿತ್ವದಲ್ಲಿವೆ. ಕೆರೆಗಳು ಮತ್ತು ಕೆರೆಗಳಿಗೆ ಹೊಂದಿಕೊಂಡಿರುವ ನಾಲೆಗಳ ಯಾವುದೇ ಒಂದಿಂಚೂ ಭೂಮಿಯನ್ನು ಒತ್ತುವರಿ ಮಾಡಲಾಗಿಲ್ಲ. ಬೇಕಿದ್ದರೆ ಯಾರು ಬೇಕಿದ್ದರೂ ಪರಿಶೀಲಿಸಲು ಬರಬಹುದು. ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು.