ಬೆಂಗಳೂರು: ತಾಯಿಯೊಂದಿಗೆ ಬೀದಿಯಲ್ಲಿ ನಿಂತು ಬ್ಯಾಡ್ಮಿಂಟನ್ ಆಡುತ್ತಿದ್ದ ಐದು ವರ್ಷದ ಬಾಲಕನಿಗೆ ಹಿಂದಿನಿಂದ ಓಡುತ್ತಾ ಬಂದ ಪಕ್ಕದ ಮನೆಯ ವ್ಯಕ್ತಿ ಕಾಲಿನಿಂದ ಒದ್ದು ಬೀಳಿಸಿದ್ದಾನೆ. ಡಿಸೆಂಬರ್ 14ರಂದು ತ್ಯಾಗರಾಜನಗರದಲ್ಲಿ ಈ ಘಟನೆ ನಡೆದಿತ್ತು. ಸಿಸಿಟಿವಿಯಲ್ಲಿ ದಾಖಲಾದ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವೀನ್ ಜೈನ್ ಎಂಬ ಬಾಲಕ ಇತರ ಬಾಲಕರೊಂದಿಗೆ ತನ್ನ ತಾಯಿಯೊಂದಿಗೆ ಬೀದಿಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಪಕ್ಕದ ಮನೆಯಿಂದ ಬಂದ ವ್ಯಕ್ತಿ ಹಿಂದಿನಿಂದ ಓಡುತ್ತಾ ಬಂದು ಕಾಲಿನಿಂದ ಒದ್ದು ಬೀಳಿಸಿದ್ದಾನೆ.
ಯಾವುದೇ ಮುನ್ಸೂಚನೆ ಇಲ್ಲದೇ, ಪಕ್ಕದ ಮನೆಯ ಗೇಟ್ ತೆರೆದು ಸಾಮಾನ್ಯನಂತೆ ಬರುವ ವ್ಯಕ್ತಿ, ಇದ್ದಕ್ಕಿದ್ದಂತೆ ಕ್ರೋಧಗೊಂಡು ಓಡುತ್ತಾ ಬಂದು ಬಾಲಕನಿಗೆ ಕಾಲಿನಿಂದ ಒದೆಯುತ್ತಾನೆ. ಪರಿಣಾಮ ಬಾಲಕ ನೆಲಕ್ಕೆ ಬೀಳುತ್ತಾನೆ. ಇದು ಪಕ್ಕದಲ್ಲಿಯೇ ಇದ್ದ ತಾಯಿಗೂ ತಕ್ಷಣ ಗೊತ್ತಾಗುವುದಿಲ್ಲ. ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 14 ರಂದು ತನ್ನ ಅಣ್ಣ ಮನೋಜ್ ಮನೆಗೆ ಭೇಟಿ ನೀಡಿದ್ದಾಗ ಮಧ್ಯಾಹ್ನ 1.10ರ ಸುಮಾರಿಗೆ ಆಕೆಯ ಮಗ ಮನೆ ಬಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಪಕ್ಕದ ಮನೆಯ ನಿವಾಸಿ ರಂಜನ್ ಎಂಬಾತ ಹಿಂದಿನಿಂದ ಬಂದು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಪರಿಣಾಮ ನೆಲದ ಮೇಲೆ ಬಿದ್ದ ನವೀನ್ ಜೈನ್ ಕಣ್ಣಿನ ಉಬ್ಬುಗಳ ಬಳಿ ರಕ್ತಬಂದಿದ್ದು, ಕೈ ಕಾಲುಗಳಿಗೆ ಗಾಯವಾಗಿದೆ ಎಂದು ಬಾಲಕನ ತಾಯಿ ದೀಪಿಕಾ ಜೈನ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.