ಬೆಂಗಳೂರು: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25ರಿಂದ 28ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ಸಮ್ಮೇಳನ (2nd Ayurveda World Summit) ನಡೆಯುವ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಇಂದು ಟೌನ್ ಹಾಲ್ ನಿಂದ ವಿಂಟೇಜ್ ಕಾರು ರ್ಯಾಲಿ ಮತ್ತು ಮಲ್ಲೇಶ್ವರದಲ್ಲಿ ವಾಕಥಾನ್ ನಡೆಯಿತು.
ವಿಶ್ವ ಆಯುರ್ವೇದ ಸಮ್ಮೇಳನದ ರುವಾರಿ ಡಾ. ಗಿರಿಧರ ಕಜೆ ಮಾತನಾಡಿ, ಆಯುರ್ವೇದದ ಮಹತ್ವವನ್ನು ಜನತೆಯ ಮುಂದಿಡಲು ಬೃಹತ್ ರೂಪದಲ್ಲಿ ಸಮ್ಮೇಳನವನ್ನು ಸಂಘಟಿಸಲಾಗಿದೆ. ಆಯುರ್ವೇದ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಜನಸಾಮಾನ್ಯರಿಗೂ ಪ್ರಯೋಜನಕಾರಿಯಾಗುವಂತೆ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ಆಹಾರ ಪ್ರದರ್ಶಿನಿ, ಆಯುರ್ವೇದ ಪಾಕೋತ್ಸವ, ಧನ್ವಂತರಿ ಮಹಾಯಜ್ಞ, ಆಯುರ್ವೇದ ಮೆಗಾ ಎಕ್ಸ್'ಪೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಲೇಸರ್ ಶೋ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಇರಲಿದೆ.
ದಕ್ಷಿಣದ ಏಳು ರಾಜ್ಯಗಳ 137 ಆಯುರ್ವೇದ ವಿದ್ಯಾಲಯಗಳನ್ನು ಧನ್ವಂತರಿ ರಥಯಾತ್ರೆಯು ಈಗಾಗಲೇ ಸಂದರ್ಶಿಸಿದ್ದು, ನಾಡಿನಾದ್ಯಂತ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮ್ಮೇಳನಕ್ಕೆ 3-4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇಂದು ಬೆಳಗ್ಗೆ 7.15ಕ್ಕೆ ಆಯುರ್ವೇದ ವಾಕಥನ್ ನಡೆಯಿತು. ಶಾಸಕ ಎಸ್. ಸುರೇಶ್ ಕುಮಾರ್ ಜಾಥಕ್ಕೆ ಚಾಲನೆ ನೀಡಿದರು.
ವಿಂಟೇಜ್ ಕಾರು ರ‍್ಯಾಲಿ
ಬೆಳಗ್ಗೆ 8.15 ಕ್ಕೆ ಟೌನ್‌ಹಾಲ್‌ನಿಂದ ಅರಮನೆ ಮೈದಾನದವರೆಗೆ Vintage Car Rally ಗೆ ಚಿತ್ರನಟ ರಮೇಶ್ ಅರವಿಂದ್ ಚಾಲನೆ ನೀಡಿದರು.