ಬೆಳಗಾವಿ: ಬೆಳಗಾವಿಯಲ್ಲಿ ನ.1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ನನಗೆ ಬೆಳಗಾವಿ ಪ್ರವೇಶ ನಿಷೇಧಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.
ಮರಾಠಿಗರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತೀ ವರ್ಷ ಬೆಳಗಾವಿಯಲ್ಲಿ ನವೆಂಬರ್ 1ರಂದು ‘ಕರಾಳ ದಿನ ಆಚರಿಸಲಾಗುತ್ತಿದೆ. ಈ ಆಚರಣೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ, ಕರ್ನಾಟಕ ಗಡಿಯಲ್ಲಿ ಅಕ್ರಮ ನೋಟೀಸ್ ನೀಡಿ ಪ್ರವೇಶ ತಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ನವೆಂಬರ್ 1, 2025ರಂದು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಾಗ, ಬೆಳಗಾವಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಅವರ ಆದೇಶದ ಮೇರೆಗೆ ಪೊಲೀಸ್ ಆಡಳಿತವು ಗಡಿ ಪ್ರವೇಶವನ್ನು ನಿರಾಕರಿಸಿದೆ.
ನಾನು ದೇಶದ ಜನರಿಂದ ಆಯ್ಕೆಯಾದ ಸಂಸದನಾಗಿದ್ದು, ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಆದರೂ, ಮೊಹಮ್ಮದ್ ರೋಷನ್ ಅಧಿಕಾರ ದುರ್ಬಳಕೆ ಮಾಡಿಕೊಂಡು ನಾನು ಬೆಳಗಾವಿಗೆ ಬರುವುದನ್ನು ತಡೆಹಿಡಿದಿದ್ದಾರೆ. ನನ್ನ ಹಕ್ಕು ಕಸಿದ ಅವರ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.