ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಹಿಂದೂ ಜನ ಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಸಲ್ಲಿಸಿರುವ ಸಂಘಟನೆ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ ಅಸಂವಿಧಾನಿಕವಾಗಿದ್ದು, ವಾಕ್ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಗಂಭೀರ ಬೆದರಿಕೆಯನ್ನುಂಟು ಮಾಡುತ್ತದೆ. ಹೀಗಾಗಿ ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ಮಸೂದೆಗೆ ಅಂಕಿತ ಹಾಕದೆ ಮರುಪರಿಶೀಲನೆಗಾಗಿ ಶಾಸಕಾಂಗಕ್ಕೆ ಹಿಂದಿರುಗಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ. ಈ ಮಧ್ಯೆ, ಬಿಜೆಪಿ ದ್ವೇಷಪೂರಿತ ಮತ್ತು ಪ್ರಚೋದನಕಾರಿ ಭಾಷಣಗಳಲ್ಲಿ ಭಾಗಿಯಾಗಿದೆ. ಹೀಗಾಗಿಯೇ ವಿಧಾನಸಭೆ ಅಂಗೀಕರಿಸಿದ ದ್ವೇಷ ಭಾಷಣ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗ ಹೆಚ್ಚಳ ಮಾಡಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. 2027ರ ಡಿಸೆಂಬರ್ ವೇಳೆಗೆ ಬೆಂಗಳೂರು ನಗರದಲ್ಲಿ 175 ಕಿ.ಮೀ ಉದ್ದದಷ್ಟು ಮೆಟ್ರೋ ಮಾರ್ಗ ಕಾರ್ಯಾರಂಭವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. BMRCL ಕಚೇರಿಯಲ್ಲಿ ಮೆಟ್ರೋ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಸಿಎಂ, ಪ್ರಸ್ತುತ 96 ಕಿಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದೆ ಎಂದರು. ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ ಸೇರಿದಂತೆ ಸುಮಾರು 100 ಕಿ.ಮೀ ಉದ್ದದ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. 25,311 ಸಾವಿರ ಕೋಟಿ ವೆಚ್ಚದ ಈ ಕಾಮಗಾರಿಗೆ, ಜೈಕಾದಿಂದ 15,600 ಕೋಟಿ ಸಾಲ ಮಾಡಲಾಗುತ್ತಿದೆ. ಉಳಿದಂತೆ ಎಲಿವೇಟೆಡ್ ಕಾರಿಡಾರ್ ಗೆ 9,700 ಕೋಟಿ ಮೊತ್ತದ ಟೆಂಡರ್ ಅನ್ನು ಜನವರಿಯಲ್ಲಿ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.
ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ತಂದೆಯೇ ಭೀಕರವಾಗಿ ಹತ್ಯೆ ಮಾಡಿರುವ ಮರ್ಯಾದಾ ಹತ್ಯೆ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಯುವತಿ ಮಾನ್ಯ ಪಾಟೀಲ ಮದುವೆಯಾಗಿ ಇನಾಂವೀರಾಪುರ ಗ್ರಾಮದಲ್ಲಿ ನೆಲೆಸಿದ್ದರು. ಮಾನ್ಯ ಪಾಟೀಲ ಏಳು ತಿಂಗಳ ಗರ್ಭೀಣಿಯಾಗಿದ್ದಳು. ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದರಿಂದ ಕೋಪಗೊಂಡಿದ್ದ ಪ್ರಕಾಶಗೌಡ ಪಾಟೀಲ ಇತರ ಕುಟುಂಬಸ್ಥರ ಜೊತೆ ಸೇರಿಕೊಂಡು ಮಾನ್ಯ ಪಾಟೀಲಳನ್ನು ಬರ್ಬರ ಹತ್ಯೆ ಮಾಡಿದ್ದರು. ಈ ಘಟನೆ ಸಂಬಂಧ ಪ್ರಕಾಶಗೌಡ ಪಾಟೀಲ ಸೇರಿದಂತೆ ಮೂವರನ್ನು ಬಂಧಿಸಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸರು 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚಾಮರಾಜನಗರದ ನಂಜೇದೇವನಪುರ ಗ್ರಾಮದ ಬಳಿ 5 ಹುಲಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನುಗಳಲ್ಲಿ ಹುಲಿಗಳು ಓಡಾಡುತ್ತಿರುವುದು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಈ ಪ್ರದೇಶಗಳಲ್ಲಿ ಇಂದಿನಿಂದ ನಾಳೆ ಸಂಜೆ 6ರವರೆಗೂ ಮನೆಗಳಿಂದ ಯಾರೂ ಹೊರಬರದಂತೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶ ಹೊರಡಿಸಿದ್ದಾರೆ. ನಿಂತು ಹೋದ ಕ್ವಾರಿಗಳನ್ನೇ ಹುಲಿಗಳು ಆವಾಸ ಸ್ಥಾನ ಮಾಡಿಕೊಂಡಿದ್ದು, ಹುಲಿಗಳನ್ನು ಸೆರೆಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ. ಹುಲಿಗಳನ್ನು ಸೆರೆಯಿಡಿಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು ಸಾಕಾನೆಗಳನ್ನು ಕರೆಸಿಕೊಂಡು ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದಾರೆ.
ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಪತ್ತೆಗಾಗಿ ಸಿಐಡಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದ ಶಾಸಕ ಬೈರತಿ ಬಸವರಾಜು ಅವರು ಅಲ್ಲಿಂದಲೇ ಮಹಾರಾಷ್ಟ್ರ ಅಥವಾ ಗೋವಾಕ್ಕೆ ತೆರಳಿದ್ದು, ಅಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಐಡಿಯ 3 ತಂಡಗಳು ಅವರಿಗಾಗಿ ಎರಡು ಮೂರು ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ. ಈ ಮಧ್ಯೆ ಬಸವರಾಜ್ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ. ವಿಮಾನ ನಿಲ್ದಾಣಗಳ ಭದ್ರತಾ ವಿಭಾಗದ ಅಧಿಕಾರಿಗಳು ಹಾಗೂ ರೈಲು ನಿಲ್ದಾಣಗಳಿಗೂ ಮಾಹಿತಿ ನೀಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಬಸವರಾಜು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.