ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಮೊದಲ ದಿನವೇ, ರಾಜ್ಯ ಸರ್ಕಾರ ಶೇ.96 ಗುರಿ ಸಾಧನೆ ಮಾಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮಯ್ಯ ಅವರು ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಪೋಲಿಯೋ ಮುಕ್ತ ದೇಶವಾಗಿ ಭಾರತ ಮುಂದುವರಿಯಲು, ಭವಿಷ್ಯದ ಸದೃಢ ನಾಗರಿಕ ಸಮಾಜದ ನಿರ್ಮಾಣಕ್ಕೆ ಎರಡು ಹನಿ ಲಸಿಕೆ ಪೂರಕವಾಗಿದೆ ಎಂದರೇ ಅತಿಶಯೋಕ್ತಿ ಆಗಲಾರದು ಎಂದು ಭಾವಿಸುತ್ತೇನೆ. ಹಾಗಾಗಿ ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸೋಣ, ಇದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
2-3 ದಿನಗಳವರೆಗೆ ಅಭಿಯಾನ ನಡೆಸಲಾಗುತ್ತಿದ್ದು, ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಪೋಷಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದರು.
ರಾಜ್ಯವು 62.4 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದು, ಅಭಿಯಾನ ಸುಗಮ ನಿರ್ವಹಣೆಗಾಗಿ, 33,258 ಬೂತ್‌ಗಳು, 1,030 ಮೊಬೈಲ್ ತಂಡಗಳು ಮತ್ತು 1,096 ಸಾರಿಗೆ ತಂಡಗಳನ್ನು ಸ್ಥಾಪಿಸಲಾಗಿದೆ. ಒಟ್ಟಾರೆಯಾಗಿ 1,13,115 ಲಕ್ಷ ಲಸಿಕೆ ಕಾರ್ಯಕರ್ತರು ಮತ್ತು 7,322 ಮೇಲ್ವಿಚಾರಕರು ಲಸಿಕೆಯನ್ನು ನೀಡಲಿದ್ದಾರೆ. ಪೋಷಕರು ಹತ್ತಿರದ ಲಸಿಕೆ ಕೇಂದ್ರವನ್ನು ಕರ್ನಾಟಕ ಅಪ್ಲಿಕೇಶನ್ ಬಳಸಿ ಪತ್ತೆ ಮಾಡಬಹುದು ಎಂದು ಮಾಹಿತಿ ನೀಡಿದರು.
1978 ರಲ್ಲಿ ಆರಂಭಗೊಂಡ ಲಸಿಕೆ ಕಾರ್ಯಕ್ರಮದಿಂದ ಭಾರತ ಕಳೆದ 14 ವರ್ಷಗಳಿಂದ ಪೋಲಿಯೋ ರಹಿತ ದೇಶವಾಗಿದೆ. ಇಂದಿಗೂ ಪಾಕಿಸ್ತಾನ, ಅಫ್ಗಾನಿಸ್ತಾನ ಮುಂತಾದ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿಯನ್ನು ಮುಂದುವರಿಸಬೇಕಿದೆ ಎಂದು ಹೇಳಿದರು.