ಬೆಂಗಳೂರು: ಕರಾವಳಿ ಕರ್ನಾಟಕದ ಮೂಲಕ ಬೆಂಗಳೂರು ಮತ್ತು ಗೋವಾದ ಮಡ್ಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಬೆಂಗಳೂರು ನಗರದಿಂದ ಹಾಸನ- ಮಂಗಳೂರು ಜಂಕ್ಷನ್- ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ಅತಿವೇಗದ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಕೋರಿದ್ದಾರೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಸಾರ್ವಜನಿಕ ಬೇಡಿಕೆ ಇದಾಗಿದೆ ಮತ್ತು ಈ ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವೇಗದ ರೈಲು ಸೇವೆ ಆರಂಭಿಸಲು ಸರ್ವ ರೀತಿಯ ಅನುಕೂಲಕರ ಮೂಲಸೌಲಭ್ಯಗಳಿವೆ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಪ್ರಸ್ತಾವಿತ ಈ ಹೈ-ಸ್ಪೀಡ್ ರೈಲು ಸೇವೆಯು ರಾಜ್ಯ ರಾಜಧಾನಿ ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾದ ಕರಾವಳಿ ನಡುವಿನ ರೈಲು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
"ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾದ ಕರಾವಳಿ ಪ್ರದೇಶಗಳ ನಡುವಿನ ಸುಧಾರಿತ ಹೈ-ಸ್ಪೀಡ್ ರೈಲು ಸಂಪರ್ಕಕ್ಕಾಗಿ ದೀರ್ಘಕಾಲದ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟ ಸಾರ್ವಜನಿಕ ಆಕಾಂಕ್ಷೆಯ ಬಗ್ಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಘಾಟ್ ವಿಭಾಗದಾದ್ಯಂತ ವಿದ್ಯುದ್ದೀಕರಣ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಈ ಮಾರ್ಗವು ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಿಸಲು ಸರ್ವ ರೀತಿಯ ಅನುಕೂಲಕರ ಮೂಲಸೌಲಭ್ಯಗಳಿವೆ" ಎಂದು ಕುಮಾರಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತದ ಐಟಿ ರಾಜಧಾನಿ ಆಗಿರುವ ಬೆಂಗಳೂರು ಮತ್ತು ಬಂದರು ನಗರ ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದ ಉಳಿದೆಲ್ಲಾ ಪ್ರಮುಖ ವಾಣಿಜ್ಯ ಕೇಂದ್ರಗಳು, ಬಂದರುಗಳು ಮತ್ತು ಪ್ರವಾಸಿ ತಾಣಗಳಿಗೆ ಹಾಗೂ ಗೋವಾ ನಡುವೆ ನೇರ ಹಾಗೂ ವೇಗದ ರೈಲು ಸಂಪರ್ಕ ಕಲ್ಪಿಸುವುದರಿಂದ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಚುರುಕಾಗಲಿವೆ ಎಂದು ಅವರು ಕುಮಾರಸ್ವಾಮಿ ಅವರು ಪ್ರತಿಪಾದಿಸಿದ್ದಾರೆ.
ಈ ರೈಲು ಸೇವೆ ಆರಂಭಿಸುವುದರಿಂದ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಈಡೇರಿಸಿದಂತೆ ಆಗುತ್ತದೆ. ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಮಿಗಿಲಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಉದ್ಯೋಗಾವಕಾಶಗಳ ವೃದ್ಧಿಗೂ ಸಹಕಾರಿಯಾಗಲಿದೆ. ಸಮಗ್ರ, ದಕ್ಷ ಮತ್ತು ಅತ್ಯಾಧುನಿಕ ಧ್ಯೇಯ ಕಾರ್ಯಜಾಲದ ಸರ್ಕಾರದ ಮುನ್ನೋಟಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ರೈಲು ಸಂಪರ್ಕವನ್ನು ಬೆಸೆಯುತ್ತದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ತಮ್ಮ ಮನವಿಯನ್ನು ಪರಿಗಣಿಸಿ ವಂದೇ ಭಾರತ್ ರೈಲು ಸೇವೆ ಆರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನೈರುತ್ಯ ರೈಲ್ವೆಯ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರೈಲ್ವೆ ಸಚಿವರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.