ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ಡೈರಿಯನ್ನು ಸೋಮವಾರ ಸಲ್ಲಿಸಿದ್ದಾರೆ.
ಮುಡಾ ಸೈಟ್ ಹಗರಣದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಬೆಂಗಳೂರಿನ ಸೆಷನ್ಸ್ ಕೋರ್ಟ್'ನಲ್ಲಿ ನಡೆಯಿತು.
ವಿಚಾರಣೆ ವೇಳೆ ಪ್ರಕರಣದ ತನಿಖೆ ಕೈಕೊಂಡಿರುವ ಲೋಕಾಯುಕ್ತ ಪೊಲೀಸರು ಕೇಸ್ ಡೈರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರಿಗೆ ಸಲ್ಲಿಕೆ ಮಾಡಿದರು.
ವಿಚಾರಣೆ ವೇಳೆ ವಾದ ಮಂಡಿಸಿದ ದೂರದಾರ ಸ್ನೇಹಮಯಿ ಕೃಷ್ಣ ಅವರು, ತನಿಖೆ ಪೂರ್ಣಗೊಂಡಿದ್ದರೂ, ಬಾಕಿ ಇದೆ ಅಂತ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ಎ1 ಹಾಲಿ ಸಿಎಂ ಅವರನ್ನು ನಿರಪರಾಧಿ ಅಂತ ತೋರಿಸುವ ಪ್ರಯತ್ನ ನಡೀತಿದೆ. ಆರೋಪ ಸಾಬೀತಾದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತೆ ಅಂದರು. ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೇ ಪ್ರಕರಣ ದಾಖಲಿಸಲು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿತು.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸುವ ಮೂಲಕ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ದೂರುದಾದ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ಕೇಸ್ ಡೈರಿ ಸಲ್ಲಿಸುವಂತೆ ಸೂಚಿಸಿತ್ತು. ಅಲ್ಲದೇ ಬಿ ರಿಪೋರ್ಟ್ ಬಗ್ಗೆ ವಾದಗಳಿದ್ದರೆ ಸಲ್ಲಿಸುವಂತೆ ಸ್ನೇಹಮಯಿ ಕೃಷ್ಣಗೂ ನೋಟಿಸ್ ನೀಡಿತ್ತು.