ಮೈಸೂರು: ಕುತೂಹಲವೊಂದು ವ್ಯಕ್ತಿಗೆ ಕೆಲ ಕಾಲ ಜೀವ ಬಾಯಿಗೆ ಬಂದಂತೆ ಮಾಡಿದ ಘಟನೆಯೊಂದು ಯಳಂದೂರು ತಾಲೂಕಿನ ಗಂಗವಾಡಿಯಲ್ಲಿ ನಡೆದಿದೆ.
ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡಿದ್ದು, 4 ತಾಸು ಒದ್ದಾಡಿದ್ದಾನೆ. ಬೋನಿನೊಳಗೆ ಕಾಲಿಟ್ಟ ಕೂಡಲೇ ಗೇಟ್ ಬಂದ್ ಆಗಿದ್ದು, ಪರಿಣಾಮ, ವ್ಯಕ್ತಿ ಸುಮಾರು 4 ಗಂಟೆಗಳ ಕಾಲ ಒಳಗೇ ಒದ್ದಾಡಿದ್ದಾನೆ.
ಗಂಗವಾಡಿ ಗ್ರಾಮದ ರೈತ ರಾಮಯ್ಯ ಎಂಬುವವರ ಜಮೀನಿನಲ್ಲಿ ಇತ್ತೀಚೆಗೆ ಚಿರತೆಯೊಂದು ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದಿತ್ತು,
ಇದರಿಂದ ಆತಂಕಗೊಂಡಿದ್ದ ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಲು ಗ್ರಾಮದ ಎರಡು ಕಡೆ ಬೋನುಗಳನ್ನು ಇರಿಸಿತ್ತು.
ಸೋಮವಾರ ಬೆಳಿಗ್ಗೆ ಸುಮಾರು 10:30ರ ವೇಳೆಗೆ, ಕಿಟ್ಟಿ ಎಂಬವರು ಕುತೂಹಲದಿಂದ ಬೋನನ್ನು ನೋಡಲು ಹೋಗಿದ್ದಾರೆ. ಬೋನು ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಲು ಒಳಗೆ ಕಾಲಿಟ್ಟಿದ್ದಾರೆ. ಈ ವೇಳೆ ಸ್ವಯಂಚಾಲಿತವಾಗಿ ಬಾಗಿಲು ಧಡೀರ್ ಬಂದ್ ಆಗಿದೆ. ಈ ವೇಳೆ ಕಿಟ್ಟಿ ಅವರು ಕೂಗಾಗಿದರೂ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಹೊರಗೆ ಬರಲು ಸಾಧ್ಯವಾಗಿಲ್ಲ.
ಘಟನೆ ವೇಳೆ ಕಿಟ್ಟಿ ಅವರ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಯಾರಿಗೂ ಕರೆ ಮಾಡಿ ವಿಷಯ ತಿಳಿಸಲು ಸಾಧ್ಯವಾಗಿಲ್ಲ. ಬೋನು ಇರಿಸಿದ್ದ ಜಾಗವು ಗ್ರಾಮದಿಂದ ಸ್ವಲ್ಪ ದೂರದಲ್ಲಿದ್ದ ಕಾರಣ ಅವರ ಕಿರುಚಾಟ ಯಾರಿಗೂ ಕೇಳಿಸಿಲ್ಲ. ಸುತ್ತಮುತ್ತ ಚಿರತೆ ಭಯವಿದ್ದಿದ್ದರಿಂದ ದನಗಾಹಿಗಳು ಅಥವಾ ರೈತರು ಆ ಭಾಗಕ್ಕೆ ಬರಲು ಹಿಂಜರಿಯುತ್ತಿದ್ದರು ಎನ್ನಲಾಗಿದೆ.
ಸುಮಾರು ನಾಲ್ಕು ಗಂಟೆಗಳ ಕಾಲ ಬೋನಿನೊಳಗೆ ಬಂಧಿಯಾಗಿದ್ದ ಕಿಟ್ಟಿ ಅವರು, ಮಧ್ಯಾಹ್ನ 2:30ರ ಸುಮಾರಿಗೆ ದೂರದಲ್ಲಿ ದನಗಾಹಿಗಳು ಕಾಣಿಸಿಕೊಂಡಾಗ ಜೋರಾಗಿ ಕೂಗಿಕೊಂಡಿದ್ದಾರೆ. ಮೊದಲು ಹೆದರಿದ ಗ್ರಾಮಸ್ಥರು, ಹತ್ತಿರ ಹೋದಾಗ ಬೋನಿನಲ್ಲಿ ಮನುಷ್ಯ ಇರುವುದನ್ನು ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ.
ನಂತರ ಜಮೀನಿನ ಮಾಲೀಕರಿಗೆ ವಿಷಯ ತಿಳಿಸಿ, ಬೋನಿನ ಬಾಗಿಲು ತೆರೆದು ಅವರನ್ನು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ.
ಬೋನಿನಿಂದ ಹೊರಬರುತ್ತಿದ್ದಂತೆ ಕಿಟ್ಟಿ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಸದ್ಯ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, 'ಕುತೂಹಲಕ್ಕೂ ಮಿತಿ ಇರಬೇಕೆಂದು ಜನರು ಹಾಸ್ಯ ಮಾಡುತ್ತಿದ್ದಾರೆ.