ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಬುಧವಾರ ಶಾಕ್ ಕೊಟ್ಟಿದೆ. ಸರ್ದಾರ್ ಸರ್ಫ್‌ರಾಜ್ ಖಾನ್ ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, 14.38 ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕರಾಗಿರುವ ಸರ್ಫ್‌ರಾಜ್, ಬಹಳಷ್ಟು ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಈಗಿನ ಜಿಬಿಎ) ಕಾರ್ಯನಿರ್ವಹಿಸುತ್ತಿದ್ದರು. ನಿಯೋಜನೆ ಮೇರೆಗೆ ಸಚಿವಾಲಯದಲ್ಲಿದ್ದಾರೆ. ಅವರ ನಿವೃತ್ತಿಗೆ ಕೆಲವೇ ದಿನಗಳು ಉಳಿದಿವೆ.
ಈ ಮಧ್ಯೆ ಸರ್ಫರಾಜ್ ಖಾನ್ ವಿರುದ್ಧ ಬಾಗಲಕೋಟೆಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ದೂರಿನ ಅನ್ವಯ ಬೆಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದರಂತೆ ಬೆಂಗಳೂರು, ಕೊಡಗು ಸೇರಿ ಸರ್ಫ್‌ರಾಜ್ ಖಾನ್ ಅವರಿಗೆ ಸೇರಿದ ಒಟ್ಟು 13 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದು, ನಗರದ ಹಲಸೂರಿನಲ್ಲಿರುವ ಅಧಿಕಾರಿ ಅವರ ಮನೆ, ಅವರ ಆಪ್ತರ ಮನೆ ಮತ್ತು ಕಚೇರಿಗಳು, ಅವರಿಗೆ ಸೇರಿದ ಕೊಡಗಿನ ತೋಟದ ಮನೆಗಳಲ್ಲಿ ಶೋಧ ನಡೆಸಿದ್ದಾರೆ.
ದಾಳಿ ವೇಳೆ ಒಟ್ಟು ರೂ.2.99 ಕೋಟಿ ಮೌಲ್ಯದಷ್ಟು ಚಿನ್ನಾಭರಣಗಳು, ರೂ.66,500 ನಗದು ಮತ್ತು ರೂ.1.64 ಕೋಟಿ ಮೌಲ್ಯದ ವಾಹನಗಳು ಪತ್ತೆಯಾಗಿವೆ. ಅಧಿಕಾರಿ ಮತ್ತು ಅವರ ಕುಟುಂಬದವರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ರೂ.1.29 ಕೋಟಿ ಠೇವಣಿ ಇವೆ. ಇವೆಲ್ಲವುಗಳ ಮೌಲ್ಯವು ಅಧಿಕಾರಿ ಅವರ ಅಧಿಕೃತ ಮೂಲದ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚು. ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿವೆ.
ಈ ನಡುವೆ ಅಂದಾಜು ರೂ.8.44 ಕೋಟಿ ಮೌಲ್ಯದ 37 ಎಕರೆ ಜಮೀನು, 4 ಮನೆಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಪತ್ತೆಯಾಗಿದ್ದು, ಇವು ಸರ್ಫ್‌ರಾಜ್ ಮತ್ತು ಕುಟುಂಬದವರ ಹೆಸರಿನಲ್ಲಿವೆ ಎಂದು ತಿಳಿದುಬಂದಿದೆ.
ಆರೋಪಿ ಅಧಿಕಾರಿಯು ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿದ್ದಾರೆಯೇ ಎಂಬುದರ ಬಗ್ಗೆ ಶೋಧ ನಡೆಯುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಏತನ್ಮಧ್ಯೆ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಜಮೀರ್, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಫರಾಜ್ ಶ್ರೀಮಂತ ಕುಟುಂಬದಿಂದ ಬಂದವರು, ಅವರ ಮೇಲೆ ದಾಳಿ ನಡೆಸಿರುವುದೇಕೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.