ದಾವಣಗೆರೆ: ಮದ್ಯದಂಗಡಿ ಪರವಾನಗಿಗೆ 1. 95 ಕೋಟಿ ರೂ. ನಿಗದಿಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಬೃಹತ್ ಉದ್ದಿಮೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮದ್ಯದಂಗಡಿ ಹರಾಜು ರಾಜ್ಯ ಸರ್ಕಾರದ ಹೊಸ ವರ್ಷದ ಕೊಡುಗೆ ಎಂದು ಗುರುವಾರ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಇಲಾಖೆಯನ್ನೂ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ ಸಿಎಸ್ ಪಿ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಟಿಎಸ್ ಪಿ) ಸೇರಿದಂತೆ ಎಲ್ಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದ ಖಜಾನೆಯನ್ನು ಬರಿದು ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಖಜಾನೆಯಿಂದ ಸಾವಿರಾರು ಕೋಟಿ ಹಣ ಬಿಡುಗಡೆಯಾಗಿರುವುದು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ, ಹಲವು ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಇಂತಹ ಆರ್ಥಿಕ ತಜ್ಞರನ್ನು ಪ್ರಪಂಚದಲ್ಲಿಯೇ ಕಾಣಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.