ಚಿಕ್ಕೋಡಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದಲ್ಲಿ ನಡೆದ ಖಾಸಗಿ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದ ಅವರು, ಸುದ್ದಿಗಾರರ ಪ್ರಶ್ನೆಗಳಿಗೆ ಅತೀ ಜಾಗರೂಕತೆಯಿಂದ ಉತ್ತರಿಸಿದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತೀಂದ್ರ, ಸಿಎಂ ಬದಲಾವಣೆ ಬಗ್ಗೆ ನಾನು ಈಗಾಗಲೇ ಹೇಳಿಕೆ ನೀಡಿದ್ದೇನೆ. ಅದರ ಬಗ್ಗೆ ಮತ್ತೊಮ್ಮೆ ನಾನು ಏನನ್ನೂ ಹೇಳಬೇಕಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಅಧಿಕಾರ ಯಾರಿಗೂ ಶಾಶ್ವತವಲ್ಲ ಹೀಗಾಗಿ ಈ ವಿಚಾರದಲ್ಲಿ ನಾನು ಹೆಚ್ಚಿಗೆ ಮಾತನಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಪೂರ್ಣವಿರಾಮ ಇಡಲು ಪ್ರಯತ್ನಿಸಿದರು. ಈ ಹಿಂದೆ 'ಐದು ವರ್ಷ ನಮ್ಮಪ್ಪನೇ ಸಿಎಂ' ಎಂದು ಹೇಳಿಕೆ ನೀಡುವ ಮೂಲಕ ಯತೀಂದ್ರ ಅವರು ಪಕ್ಷದೊಳಗೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದ್ದರು.
ಹಿಂದುಳಿದವರ, ದೀನ ದಲಿತರ, ಅಲ್ಪಸಂಖ್ಯಾತರ ಶ್ರೇಯಸ್ಸಿಗಾಗಿ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗಲಿರುಳು ಶ್ರಮಿಸುತ್ತಿದ್ದು ಅವರ ಇಚ್ಛೆಯಂತೆ ತಾವು ಕೂಡಾ ನಡೆಯುವುದಾಗಿ, ಅಹಿಂದ ಜನರ ಪರವಾಗಿ ಶ್ರಮಿಸುವುದಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು.