ಮೈಸೂರು: ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ, ಬಲೂನಿಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವಿಗೀಡಾದ ಸ್ಥಳವನ್ನು ಶುಕ್ರವಾರ ಎನ್‌ಐಎ ತಂಡ ಪರಿಶೀಲಿಸಿದೆ.
ಗುರುವಾರ ಸಂಜೆ ಸ್ಫೋಟ ಸಂಭವಿಸಿದ್ದು, ಬಲೂನು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೊಫಿಯ ಗ್ರಾಮದ ಸಲೀಂ (40) ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದು, ಐವರು ಗಾಯಗೊಂಡಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕೋಲ್ಕತ್ತಾದ ಶಮಿನಾ ಶಬಿಲ್, ರಾಣೆಬೆನ್ನೂರಿನ ಕೊಟ್ರೇಶ್ ಅವರಿಗೆ ಗಾಯವಾಗಿದೆ. ಸದ್ಯ ಲಕ್ಷ್ಮಿ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ್ದು, ತನಿಖೆಗೆ ಅಗತ್ಯವಾದ ಸಾಮಗ್ರಿಗಳನ್ನು ಸ್ಥಳದಿಂದ ಸಂಗ್ರಹಿಸಿದೆ.
ಹೊರ ರಾಜ್ಯದಿಂದ ನಗರಕ್ಕೆ ಬಂದಿದ್ದ ಮೂವರು ಯುವಕರು ಮಂಡಿ ಮೊಹಲ್ಲಾದಲ್ಲಿ ವಾಸಿಸುತ್ತಿದ್ದರು. ಅರಮನೆ ಸುತ್ತಮುತ್ತ ಬಲೂನ್ ವ್ಯಾಪರ ನಡೆಸುತ್ತಿದ್ದರು. ಸಲೀಂ ಎಂದಿನಂತೆ ಜಯಮಾರ್ತಾಂಡ ದ್ವಾರದ ಬಳಿ ವ್ಯಾಪಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.