ಹೊಸಪೇಟೆ: ಹಂಪಿಯ ಅಷ್ಟಭುಜ ಸ್ನಾನದ ಕೊಳ ಸಮೀಪದ ಗುಡ್ಡದ ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದ ಫ್ರಾನ್ಸ್‌ನ ಪ್ರವಾಸಿಗರೊಬ್ಬರನ್ನು ಎರಡು ದಿನಗಳ ಬಳಿಕ ಪೊಲೀಸರು ರಕ್ಷಣೆ ಮಾಡಿದ್ದು, ಕೊಪ್ಪಳ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಡಿ.24ರಂದು ಸಂಜೆ ಗುಡ್ಡ ಹತ್ತಲು ಯತ್ನಿಸಿದ್ದ ಬ್ರೂನೊ ರೋಜರ್ (52) ಕಾಲು ಜಾರಿ ಬಿದ್ದಿದ್ದರು. ಕಾಲಿಗೆ ತೀವ್ರ ಗಾಯವಾಗಿದ್ದರಿಂದ ನಡೆಯಲು ಸಾಧ್ಯವಾಗದೆ ಸ್ಥಳದಲ್ಲಿಯೇ 2 ದಿನಗಳ ಕಾಲ ನರಳಾಡಿದ್ದಾರೆ.
ಪ್ರವಾಸಿಗ ಬಿದ್ದ ಸ್ಥಳ ನಿರ್ಜನ ಪ್ರದೇಶವಾಗಿತ್ತು. ಹೀಗಾಗಿ, ಯಾರ ಗಮನಕ್ಕೂ ಬಂದಿಲ್ಲ. ಬಳಿಕ ಪ್ರವಾಸಿಗ ಹೇಗೋ ತೆವಳಿಕೊಂಡು ಸಮೀಪದ ಬಾಳೆ ತೋಟಕ್ಕೆ ಶುಕ್ರವಾರ ಬಂದಿದ್ದಾರೆ.
ಈ ವೇಳೆ ಸ್ಥಳೀಯ ರೈತರು ಅವರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.
ಫ್ರಾನ್ಸ್‌ನಿಂದ ಏಕಾಂಗಿಯಾಗಿ ಬಂದಿದ್ದ ರೋಜರ್ ಅವರು ಕಡ್ಡಿರಾಂಪುರದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಪ್ರವಾಸಿಗ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಹಂಪಿ ಸುತ್ತಮುತ್ತಲು ಹಾಗೂ ನಿರ್ಜನ ಪ್ರದೇಶಗಳಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸಬೇಕು, ಪುರಾತನ ತಾಣಗಳಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.