ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಸಂಭ್ರಮವನ್ನು ಸುರಕ್ಷಿತವಾಗಿ ಆಚರಿಸುವ ಉದ್ದೇಶದಿಂದ ನಗರದಲ್ಲಿ ಬಾರ್, ಪಬ್, ಹೋಟೆಲ್‌ಗಳು ಹಾಗೂ ಕಾರ್ಯಕ್ರಮ ಆಯೋಜಿಸುವ ಸ್ಥಳಗಳಿಗೆ ಬುಧವಾರ ರಾತ್ರಿ 1 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಲೀಕರು ಮತ್ತು ಆಯೋಜಕರೊಂದಿಗೆ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು, ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದಲ್ಲಿನ ಎಲ್ಲಾ ಉಪವಿಭಾಗ ಹಾಗೂ ಠಾಣಾ ವ್ಯಾಪ್ತಿಗಳಲ್ಲಿ ಬಾರ್, ಪಬ್ ಮತ್ತು ಹೋಟೆಲ್ ಮಾಲೀಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದ್ದು, ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.
ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಮದ್ಯಪಾನ ಮಾಡಬಾರದು. ಜೊತೆಗೆ, ಪ್ರಚೋದನಕಾರಿ ಹಾಡುಗಳು, ಪಟಾಕಿ ಸ್ಫೋಟ, ಕಾನೂನುಬಾಹಿರ ಪಾರ್ಟಿಗಳು ಮತ್ತು ರೇವ್ ಪಾರ್ಟಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮ ಆಯೋಜಕರು ತಮ್ಮ ಈವೆಂಟ್ ವಿವರಗಳನ್ನು ಮುಂಚಿತವಾಗಿಯೇ ಪೊಲೀಸರಿಗೆ ತಿಳಿಸಬೇಕು. ಬಾರ್ ಹಾಗೂ ಪಬ್ ಮಾಲೀಕರು ಹೆಚ್ಚುವರಿ ಸಮಯಕ್ಕೆ ಮನವಿ ಸಲ್ಲಿಸಿದ್ದ ಹಿನ್ನೆಲೆ, ನಿಯಮ ಪಾಲನೆಯ ಷರತ್ತಿನೊಂದಿಗೆ ರಾತ್ರಿ 1ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಮಾದಕ ವಸ್ತುಗಳ ಸೇವನೆ, ಮಾರಾಟ ಅಥವಾ ಸಂಗ್ರಹದ ಬಗ್ಗೆ ಮಾಹಿತಿ ಲಭ್ಯವಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ಅಗ್ನಿ ಅವಘಡ ಅಥವಾ ಕಾಲ್ತುಳಿತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರವೇಶ ದ್ವಾರಗಳು, ನಿರ್ಗಮನ ದ್ವಾರಗಳು, ಪಾರ್ಕಿಂಗ್ ಪ್ರದೇಶಗಳು ಮತ್ತು ಕಾರ್ಯಕ್ರಮದ ಆವರಣದಲ್ಲಿ ಜನದಟ್ಟಣೆಯನ್ನು ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸ್ಥಳಗಳಲ್ಲಿ, ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ನಿಯಮ ಉಲ್ಲಂಘನೆಯು ಕಂಡುಬಂದಲ್ಲಿ ಆಯೋಜಕರು ಮಾತ್ರವಲ್ಲದೆ ಕಟ್ಟಡದ ಮಾಲೀಕರು ಹಾಗೂ ನಿರ್ವಾಹಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು. ಭದ್ರತಾ ಸಿಬ್ಬಂದಿ, ಡಿಜೆಗಳು ಮತ್ತು ಬೌನ್ಸರ್‌ಗಳನ್ನು ನಿಯೋಜಿಸುವ ಏಜೆನ್ಸಿಗಳನ್ನು ಖಾಸಗಿ ಭದ್ರತಾ ಏಜೆನ್ಸಿ ನಿಯಂತ್ರಣ ಕಾಯ್ದೆ (ಪಿಎಸ್‌ಎಆರ್‌ಎ) ಅಡಿಯಲ್ಲಿ ನೋಂದಾಯಿಸಬೇಕು. ಅವರ ವಿವರಗಳನ್ನು ಪರಿಶೀಲಿಸಿದ ಗುರುತಿನ ಚೀಟಿಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಸಲ್ಲಿಸಬೇಕು.
ನಗರ ಪೊಲೀಸರು ವಿತರಿಸುವ ಕ್ಯೂಆರ್ ಕೋಡ್ ಅನ್ನು ಸಾರ್ವಜನಿಕರಿಗೆ ಕಾಣುವಂತೆ ಅಳವಡಿಸುವುದು ಕಡ್ಡಾಯವಾಗಿದ್ದು, ಯಾವುದೇ ಗಲಾಟೆ ಅಥವಾ ತುರ್ತು ಪರಿಸ್ಥಿತಿ ಉಂಟಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.