ಬೆಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮೂವರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಡಿಸೆಂಬರ್ 24 ರಂದು ಮಹಿಳೆ ಬೈಕ್ ನಲ್ಲಿ ಜಯನಗರ ಮೆಟ್ರೋ ನಿಲ್ದಾಣದಿಂದ ಬಿಟಿಎಂ ಲೇಔಟ್ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು.
ಆರೋಪಿಗಳಲ್ಲಿ 18 ವರ್ಷದ ಗ್ಯಾರೇಜ್ ಕೆಲಸಗಾರನೂ ಸೇರಿದ್ದು, 19 ವರ್ಷದ ಇತರ ಇಬ್ಬರು ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಹಿಳೆಯ ಪೊಪೈಲ್ ನಲ್ಲಿ ನಟಿ ಎಂದು ಹೇಳಿಕೊಂಡಿದ್ದಾರೆ.
ಬೈಕ್ ನಲ್ಲಿ ಮೂವರು ಅಪರಿಚಿತ ಯುವಕರು ತನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದ್ದರು. ಆರಂಭದಲ್ಲಿ ಕಡಿಮೆ ವಾಹನಗಳು ಚಲಿಸುತ್ತಿದ್ದ ಏಕಾಂತ ರಸ್ತೆಯಲ್ಲಿ ನಂತರ ಮುಖ್ಯ ರಸ್ತೆಯಲ್ಲೂ ಅವರು ತನನ್ನು ಹಿಂಬಾಲಿಸಿದರು. ಅವರ ನಡವಳಿಕೆಯು ನನ್ನನ್ನು ಕೆರಳಿಸಿತು. ಅಲ್ಲದೇ ಅಸುರಕ್ಷಿತ ಭಾವನೆ ಉಂಟುಮಾಡಿತು. ಅವರು ನಿಲ್ಲಿಸುತ್ತಾರೆಯೇ ಎಂದು ಪರಿಶೀಲಿಸಲು ಬೈಕ್ ನ್ನು ನಿಧಾನವಾಗಿ ಓಡಿಸಲು ಪ್ರಯತ್ನಿಸಿದೆ. ಆದರೆ ನಾನು ಉಡುಪಿ ಗಾರ್ಡನ್ ಸಿಗ್ನಲ್ ತಲುಪುವವರೆಗೂ ಅವರು ನನ್ನನ್ನು ಹಿಂಬಾಲಿಸಿದರು ಎಂದು ಅವರು ಹೇಳಿದ್ದಾರೆ.
ಸಿಗ್ನಲ್ ತಲುಪಿದ ನಂತರ ಅವರು ಹಾಗೆಯೇ ಬರುತ್ತಿದ್ದರು. ತಕ್ಷಣವೇ ಅವರ ಬೈಕ್ ನ ಮುಂಭಾಗದಿಂದ ಪೋಟೋ ತೆಗೆದುಕೊಂಡೆ. ತದನಂತರ ಅವರು ಪರಾರಿಯಾದರು. ಬೈಕ್ ನ ಹಿಂಬದಿಯ ನಂಬರ್ ಪ್ಲೇಟ್ ಅನ್ನು ರೆಕಾರ್ಡ್ ಮಾಡದಂತೆ ತಡೆಯಲು ತಮ್ಮ ಕಾಲಿನಿಂದ ಮುಚ್ಚಿದರು. ಆದಾಗ್ಯೂ, ಈ ಸಣ್ಣ ವಿಡಿಯೋವನ್ನು ರೆಕಾರ್ಡ್ ಮಾಡಿದೆ ಎಂದು ಅವರು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ, ಎಸ್‌ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಂತರ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.