ಬೆಂಗಳೂರು: ಯಲಹಂಕದ ಕೋಗಿಲು ಸಮೀಪದ ಫಕೀರ್ ಲೇಔಟ್ ಮತ್ತು ವಸೀಮ್ ಲೇಔಟ್ ಪ್ರದೇಶಗಳಲ್ಲಿ ಸ್ಲಂ ಮನೆಗಳ ತೆರವು ನಡೆದ ಸುಮಾರು ಒಂದು ವಾರದ ಬಳಿಕ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣೆ ಆಯೋಗದ (KSCPCR) ಅಧ್ಯಕ್ಷ ಶಶಿಧರ್ ಕೊಸಾಂಬೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದರು.
ಪರಿಶೀಲನೆ ವೇಳೆ ತೆರವು ಕಾರ್ಯಾಚರಣೆಯಿಂದಾಗಿ 300 ಕ್ಕೂ ಅಧಿಕ ಕುಟುಂಬಗಳು ಬೀದಿಗೆ ಬಂದಿದ್ದು, ತೀವ್ರ ಚಳಿಯಲ್ಲಿ ವಾಸಸ್ಥಾನವಿಲ್ಲದೆ ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದು ಕಂಡು ಬಂದಿದೆ.
ಈ ವೇಳೆ ಶಶಿಧರ್ ಅವರು, ಮಕ್ಕಳ ಕಲ್ಯಾಣ ಸಮಿತಿ (CWC), ಜಿಲ್ಲೆ ಮಕ್ಕಳ ರಕ್ಷಣೆ ಅಧಿಕಾರಿ (DCPO) ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ (CDPO)ಗಳಿಗೆ ಮಕ್ಕಳ ರಕ್ಷಣೆ ಕುರಿತು ಕ್ಷೇತ್ರ ಅಧ್ಯಯನ ನಡೆಸಿ, ತೆರವು ಪ್ರಕ್ರಿಯೆಯ ಸಂಪೂರ್ಣ ವಿವರಗಳು ಮತ್ತು ಪರಿಣಾಮಿತರ ಮಾಹಿತಿಯನ್ನು ಪಡೆದು ವರದಿ ಸಲ್ಲಿಸುವಂತೆ ಹಾಗೂ ಸಂಬಂಧಿತ ನಾಗರಿಕ ಸಂಸ್ಥೆಗೆ ನೋಟೀಸ್ ನೀಡುವಂತೆ ಸೂಚನೆ ನೀಡಿದ್ದಾರೆ.
ಎಲ್ಲಿಗೂ ಹೋಗಲು ಸಾಧ್ಯವಾಗದೆ ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ ಸಾಕಷ್ಟು ಮಕ್ಕಳಿದ್ದಾರೆ. ಹಲವರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ತೆರವು ಕಾರ್ಯಾಚರಣೆಯಿಂದ ಅವರ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಲಿದೆ, ಅವರಿಗೆ ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಸ್ಥಳ ಪರಿಶೀಲನೆಯ ನಂತರ ಮಕ್ಕಳ ಸಂಖ್ಯೆ, ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಹಾಗೂ ಮಕ್ಕಳ ಆರೋಗ್ಯ ಸ್ಥಿತಿ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ವರದಿ ಆಧರಿಸಿ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಹಾಗು ಶಿಕ್ಷಣ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು. ಕುಟುಂಬಗಳಿಗೆ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರಿಗೆ ಉತ್ತಮ ಆರೈಕೆಗಾಗಿ ಬಾಲ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಮಾತನಾಡಿ, ತೆರವು ಕ್ರಮವನ್ನು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ವತಿಯಿಂದ ಕೈಗೊಳ್ಳಲಾಗಿದೆ. 2015ರಲ್ಲಿ ಬಿಬಿಎಂಪಿಗೆ ಹಂಚಿಕೆಯಾದ 15 ಎಕರೆ ಭೂಮಿಯಲ್ಲಿ ಅನಿಲ ಉತ್ಪಾದನಾ ಘಟಕ ಹಾಗೂ ಇತರೆ ಘಟಕಗಳನ್ನು ನಿರ್ಮಿಸಲು ಸಿದ್ದತೆ ನಡೆಸಲಾಗುತ್ತಿದೆ. ಈ ಪ್ರದೇಶವು ತ್ಯಾಜ್ಯ ವಿಸರ್ಜನೆ ಪ್ರದೇಶವಾಗಿದ್ದು, ಮಾನವ ವಾಸಕ್ಕೆ ಸುರಕ್ಷಿತವಲ್ಲ. ಆದ್ದರಿಂದ ಡಿಸೆಂಬರ್ 20, 2025 ರಂದು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಪುನರ್ವಸತಿ ವ್ಯವಸ್ಥೆಯೂ ಮಾಡಲಾಗಿದೆ ಎಂದು ಹೇಳಿದ್ದಾರೆ.