ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿಯ ಪ್ರಕರಣಗಳು ಮುಂದುವರಿದಿದ್ದು, ಮಂಗಳೂರಿನ ಮಳಲಿ–ನಾರ್ಲಪದವು ರಸ್ತೆಯಲ್ಲಿ ಗೋಮಾಂಸ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ.
ಅಬ್ದುಲ್ ಸತ್ತಾರ್ ಮುಲ್ಲಾರಪಟ್ನಾ ಎಂಬುವವರು ದ್ವಿಚಕ್ರ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದ ವೇಳೆ ಟಾಟಾ ಸುಮೊದಲ್ಲಿ ಹಿಂಬಾಲಿಸಿದ ಕೆಲವರು, ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಘಟನೆ ವೇಳೆ ದ್ವಿಚಕ್ರ ವಾಹನ ಬಿದ್ದ ಪರಿಣಾಮ ಸೈಲೆನ್ಸರ್ ಸ್ಪರ್ಶದಿಂದ 11 ವರ್ಷದ ಬಾಲಕಿಗೆ ಗಾಯವಾಗಿದೆ.
ಶನಿವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಅಬ್ದುಲ್ ಸತ್ತಾರ್ ಎಂಬುವವರು ತಮ್ಮ ಪುತ್ರಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಟಾಟಾ ಸುಮೊದಲ್ಲಿ ಹಿಂಬಾಲಿಸಿದ ಸುಮಿತ್ ಭಂಡಾರಿ (21) ಹಾಗೂ ರಜತ್ ನಾಯಕ್ (30) ಎಂಬುವವರು ರಸ್ತೆಗೆ ಅಡ್ಡವಾಗಿ ವಾಹನ ನಿಲ್ಲಿಸಿ ಬೈಕ್‌ನ್ನು ತಡೆದಿದ್ದಾರೆನ್ನಲಾಗಿದೆ. ಘಟನೆ ವೇಳೆ ಬೈಕ್ ನಿಂದ ಬಾಲಕಿ ಬಿದ್ದಿದ್ದು, ಸೈಲೆನ್ಸರ್‌ಗೆ ಕಾಲು ತಾಕಿದ ಪರಿಣಾಮ ಬಾಲಕಿ ಗಾಯಕೊಂಡಿದ್ದಾಳೆಂದು ತಿಳಿದುಬಂದಿದೆ.
ಘಟನೆ ಬಳಿಕ ಅಬ್ದುಲ್ ಸತ್ತಾರ್ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಗಾಯಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಾಲಕಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಬಜ್ಪೆ ಪೊಲೀಸರು ಆರೋಪಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ (ಮೋರಲ್ ಪೋಲಿಸಿಂಗ್) ಹಾಗೂ ಅಕ್ರಮವಾಗಿ ರಸ್ತೆ ತಡೆದ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ರಜತ್ ನಾಯಕ್ ಅವರು ನಾವು ಮಹರ್ಷಿ ಕ್ಲಿನಿಕ್‌ಗೆ ಔಷಧಿ ವಿತರಿಸಲು ಹೋಗುತ್ತಿದ್ದೆವು ಎಂದು ಹೇಳಿಕೆ ನೀಡಿದ್ದರೂ, ಕ್ಲಿನಿಕ್ ವೈದ್ಯರು ಯಾವುದೇ ಔಷಧಿ ವಿತರಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ ದೇವಾಲಯಕ್ಕೆ ಹೋಗುತ್ತಿದ್ದೆವು ಎಂದು ಆರೋಪಿಗಳು ಹೇಳಿದರೂ, ಯಾವ ದೇವಾಲಯ ಎಂಬುದನ್ನು ತಿಳಿಸಲು ವಿಫಲರಾಗಿದ್ದು, ಇದು ಪೊಲೀಸರ ಅನುಮಾನವನ್ನು ಹೆಚ್ಚಿಸಿದೆ.
ಇನ್ನೊಂದೆಡೆ, ದಾಖಲೆಗಳಿಲ್ಲದೆ ಗೋಮಾಂಸ ಸಾಗಣೆ ಮಾಡಿದ ಆರೋಪದ ಮೇರೆಗೆ ಅಬ್ದುಲ್ ಸತ್ತಾರ್ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತ (ಸುವೋ ಮೊಟು) ಪ್ರಕರಣ ದಾಖಲಿಸಿದ್ದಾರೆ. ಆತನ ಬಳಿ ಸುಮಾರು 19 ಕೆ.ಜಿ. ಗೋಮಾಂಸವಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ಬಿಲ್ ಅಥವಾ ದಾಖಲೆಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.