ಬೆಂಗಳೂರು: ರೈತರ ಪ್ರತಿಭಟನೆಗಳ ನಂತರ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದಂತೆ ವಿಬಿ ಜಿ ರಾಮ್ ಜಿ ಮಸೂದೆಯನ್ನೂ ಕೇಂದ್ರ ಸರ್ಕಾರ ರದ್ದು ಮಾಡಲಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಳೀಕರಿಸಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರ, ವಿಕಸಿತ್ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಅಭಿಯಾನ ಗ್ರಾಮೀಣ (ವಿಬಿ ಐ ರಾಮ್ ಜಿ) ಕಾಯ್ದೆಯನ್ನು ರೂಪಿಸಿದೆ. ಈ ಕಾಯಿದೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಯಥಾವತ್ತು ರೂಪವಾಗಿದೆ. ಆದರೆ, ಜನರ ಹಕ್ಕುಗಳನ್ನು ಕಸಿಯುವಂತೆ ಮಾರ್ಪಾಡು ಮಾಡಲಾಗಿದೆ ಎಂದು ಆರೋಪಿಸಿದರು.
ಗ್ರಾಮೀಣ ಜನರ ಜೀವನೋಪಾಯ, ಪಂಚಾಯಿತಿಗಳ ಅಧಿಕಾರ ಮತ್ತು ರಾಜ್ಯ ಸರ್ಕಾರಗಳ ಸ್ವಾಯತ್ತತೆಗೆ ಕಾಯ್ದೆಯಿಂದ ಧಕ್ಕೆಯಾಗಿದೆ. ಬೇಡಿಕೆ ಆಧಾರಿತ ಮಾದರಿಯಿಂದ ಪೂರೈಕೆ ಆಧರಿತ ವ್ಯವಸ್ಥೆಗೆ ಯೋಜನೆಯನ್ನು ಬದಲಾಯಿಸಲಾಗಿದೆ. ಈ ಮೊದಲು ಉದ್ಯೋಗ ಕಾರ್ಡ್ ಹೊಂದಿದವರು ದೇಶದ ಯಾವ ಭಾಗದಲ್ಲಾದರೂ ಹೋಗಿ ಕೆಲಸ ಮಾಡಬಹುದಿತ್ತು. ಹೊಸ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಗುರುತಿಸಿದ ಅಥವಾ ನೋಟಿಫೈ ಮಾಡಿದ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡಬೇಕಾಗಿದೆ. ಈ ಮೊದಲು ಕೂಲಿ ಹಣ ಪಂಚಾಯಿತಿಗಳಿಗೆ ನೇರವಾಗಿ ಬಿಡುಗಡೆಯಾಗುತ್ತಿತ್ತು ಈಗ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಬೇಕಿದೆ.
ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರ ಕೊರತೆಯಾಗದಂತೆ ಮತ್ತು ಕೂಲಿಯ ದರ ಹೆಚ್ಚಳವಾಗುವುದನ್ನು ತಡೆಯಲು ವರ್ಷದಲ್ಲಿ 60 ದಿನ ಉದ್ಯೋಗ ಖಾತ್ರಿ ಕೆಲಸಗಳಿಗೆ ರಜೆ ನೀಡುವುದಾಗಿ ಹೊಸ ಕಾಯ್ದೆಯಲ್ಲಿ ತಿಳಿಸಲಾಗಿದೆ. ಭೂ ಮಾಲೀಕರ ಜಮೀನುಗಳಲ್ಲಿ ಕೆಲಸ ಮಾಡಲು ಇಚ್ಚಿಸದೆ ಇದ್ದವರಿಗೆ ಇನ್ನು ಮುಂದೆ ಅನ್ಯ ಮಾರ್ಗ ಇಲ್ಲದೆ, ಬಲ್ಲಾಡ್ಯರು ಕೊಟ್ಟಷ್ಟು ಕೂಲಿಗೆ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಕೇಂದ್ರ ಸರ್ಕಾರ ಈ ಮೊದಲು ಉದ್ಯೋಗ ಖಾತ್ರಿಯ ಸಂಪೂರ್ಣ ಕೂಲಿಯನ್ನು ಪಾವತಿ ಮಾಡುತ್ತಿತ್ತು. ಇನ್ನು ಮುಂದೆ ಶೇ.60ರಷ್ಟು ಮಾತ್ರ ಪಾವತಿಸಲಿದೆ. ರಾಜ್ಯ ಸರ್ಕಾರ ಶೇ.40ರಷ್ಟು ವೆಚ್ಚವನ್ನು ಭರಿಸಬೇಕಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆಲ್ಲ ರಾಜ್ಯದ ಪಾಲಿನ ವೆಚ್ಚವನ್ನು ಹೆಚ್ಚಳ ಮಾಡಲಾಗುತ್ತಿದೆ. ವಿಕಸಿತ ಭಾರತ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವವರಿಗೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಪೂರ್ಣ ಪ್ರಮಾಣದ ಅನುದಾನ ಒದಗಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮನರೇಗಾ ಯೋಜನೆಯಲ್ಲಿ ನಾವು ಗ್ರಾಮೀಣದ ಆಸ್ತಿಗಳನ್ನು ನಿರ್ಮಾಣ ಮಾಡಬಹುದಾಗಿತ್ತು. ಗ್ರಾಮ ಸಭೆ ನಡೆಸಿ, ಗ್ರಾಮಸ್ಥರಿಗೆ ಏನು ಬೇಕು, ಪಂಚಾಯ್ತಿಗಳಿಗೆ ಏನು ಬೇಕು ಎಂದು ನಿರ್ಧಾರ ಮಾಡಬಹುದಿತ್ತು. ಕಳೆದ ಎರಡೂವರೆ ವರ್ಷದಲ್ಲಿ 17 ಲಕ್ಷ ಹಳ್ಳಿ ಮಟ್ಟದಲ್ಲಿ ಆಸ್ತಿ ಸೃಜನೆ ಮಾಡಲಾಗಿದೆ. 80 ಲಕ್ಷ ಕುಟುಂಬಗಳಿಗೆ ಜೀವನೋಪಾಯ ನೀಡಿದ್ದೇವೆ. 21,144 ಕೋಟಿ ವೆಚ್ಚ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬದಲಾವಣೆಯಿಂದ ಈ ಯೋಜನೆಯಲ್ಲಿ ಗುತ್ತಿಗೆ ಆಧಾರಿತ ಕಾಮಗಾರಿಗಳತ್ತ ಸಾಗುವಂತಾಗಿದೆ.
ಸೆಕ್ಷನ್ 21 (2)ನಲ್ಲಿ ಗುತ್ತಿಗೆದಾರರನ್ನು ಬಳಸಿಕೊಂಡು ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮನರೇಗಾ ಯೋಜನೆಯಲ್ಲಿ ಗುತ್ತಿಗೆದಾರ ಎಂಬ ಹೆಸರೇ ಇರಲಿಲ್ಲ. ಉದಾಹರಣೆಗೆ ಪ್ರಾಥಮಿಕ ಶಾಲೆಯನ್ನು ಕಟ್ಟುತ್ತಿರುವಾಗ ಅದರ ಕಾಂಪೌಂಡ್ ಅನ್ನು ಉದ್ಯೋಗ ಖಾತರಿಯಿಂದ ಕಟ್ಟಿದರೆ ಇಲ್ಲಿ ಯೋಜನೆಗಳ ಸಮ್ಮಿಳಿತವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಕ್ರಾಮಿಕರು ಗುತ್ತಿಗೆದಾರರ ಅಡಿಯಲ್ಲಿ ದುಡಿಯಬೇಕಾಗುತ್ತದೆ. ಮನರೇಗಾದಲ್ಲಿ ಎಲ್ಲಾ ಪಂಚಾಯ್ತಿಗೆ ಅನುದಾನ ಬರುತ್ತಿತ್ತು. ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಅಧಿಸೂಚನೆಗೊಂಡ ಪಂಚಾಯ್ತಿಗಳಿಗೆ ಮಾತ್ರ ಅನುದಾನ ಬರುತ್ತದೆ ಎಂದು ಹೇಳಿದರು.
ಇದೆಲ್ಲದರ ಜೊತೆಗೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಯ ನಿಯಮ ಉಲ್ಲಂಘಿಸಿದೆ. ಕೇಂದ್ರ ಸರ್ಕಾರಕ್ಕೆ ಕೇವಲ ಕನ್ನಡಿಗರ ದುಡಿಮೆ ಹಾಗೂ ಬೇವರು, ತೆರಿಗೆ, ಸಾಮರ್ಥ್ಯ, ಪ್ರತಿಭೆ ಮಾತ್ರ ಬೇಕಾಗಿದೆ. ಅವರ ವಿಕಸಿತ ಭಾರತದ ಕನಸನ್ನು ಕನ್ನಡಿಗರು ನನಸು ಮಾಡಬೇಕಿದೆ. ಅವರು ನಮಗೆ ಪ್ರತಿಯಾಗಿ ಕೊಡುವುದು ಚೊಂಬು. ಸಂವಿಧಾನದ ಆರ್ಟಿಕಲ್ 280 ಪ್ರಕಾರ ಹಣಕಾಸು ಆಯೋಗವನ್ನು ರಚಿಸಿದೆ. ಇದು ದೇಶದಲ್ಲಿ ರಾಜ್ಯಗಳ ನಡುವೆ ವಿವಿಧ ಹಂತಗಳಲ್ಲಿ ಆರ್ಥಿಕ ಹಣಕಾಸು ಹಂಚಿಕೆ ಮಾಲಾಗುತ್ತದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರದ ಆಯವ್ಯಯದ ಸಂಬಂಧದ ತೀರ್ಮಾನ ಮಾಡಲಾಗುವುದು. ಅಲ್ಲದೆ ರಾಜ್ಯಗಳಿಂದ ಬಂದ ಆದಾಯವನ್ನು ವಿವಿಧ ರಾಜ್ಯಗಳಿಗೆ ಮರು ಹಂಚಿಕೆ ಮಾಡಲಾಗುವುದು. ಜೊತೆಗೆ ಹಣಕಾಸು ಆಯೋಗ ಪಂಚಾಯ್ತಿ, ಮುನ್ಸಿಪಲ್, ನಗರ ಸ್ಥಳೀಯ ಸಂಸ್ಥೆಗಳ ಬೇಡಿಕೆ ನುಸಾರ ಹಂಚಿಕೆ ಮಾಡುವ ಜವಾಬ್ದಾರಿ ಹೊಂದಿದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಆಯವ್ಯದಲ್ಲಿ ತಾರತಮ್ಯವಾಗದೇ, ಎಲ್ಲವೂ ಕೇಂದ್ರೀಕೃತವಾಗದಂತೆ ನೋಡಿಕೊಳ್ಳುವುದು ಅದರ ಜವಾಬ್ದಾರಿ ಎಂದರು.
16ನೇ ಹಣಕಾಸು ಆಯೋಗ ತನ್ನ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 60:40 ಅನುದಾನ ಹಂಚಿಕೆ ಮಾಡುವ ವಿಚಾರವಾಗಿ ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ಚರ್ಚೆ ನಡೆಸಿದೆಯೇ? 16ನೇ ಹಣಕಾಸು ಆಯೋಗಕ್ಕೆ ತಿಳಿಸಿದೆಯೇ? ಪ್ರತಿ ವರ್ಷ ನಮಗೆ 3-4 ಸಾವಿರ ಕೋಟಿ ರಾಜ್ಯ ಸರ್ಕಾರ ನೀಡಬೇಕು ಎಂದರೆ ಹಣಕಾಸು ಆಯೋಗಕ್ಕೆ ಮಾಹಿತಿ ನೀಡಿದ್ದೀರಿ. ಇದರೊಂದಿಗೆ ಕೇಂದ್ರ ಸರ್ಕಾರ ಸಂವಿಧಾನದ ಆರ್ಟಿಕಲ್ 280 ಉಲ್ಲಂಘನೆ ಮಾಡಿದೆ.
ಇನ್ನು ಆರ್ಟಿಕಲ್ 258 ಅನ್ನು ಉಲ್ಲಂಘನೆ ಮಾಡಿದೆ. 60:40 ಅನುಪಾದದ ಅನುದಾನ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಯಾರ ಜೊತೆ ಚರ್ಚೆ ಮಾಡಿದೆ. ಮೋದಿ ವರು ರಾತ್ರಿ ಕನಸು ಕಂಡು, ಬೆಳಗ್ಗೆ ಮಸೂದೆ ತರುತ್ತಾರೆ. ರಾಜ್ಯ ಸರ್ಕಾರಗಳು ಎಳ್ಲದಕ್ಕೂ ತಲೆ ಅಲ್ಲಾಡಿಸಿಕೊಂಡು ಕೂರಬೇಕಾ? ಪಂಚಾಯ್ತಿ ಹಕ್ಕು, ಜೀವನೋಪಾಯ, ರಾಜ್ಯ ಸರ್ಕಾರಗಳ ಹಕ್ಕು ಮೊಟಕುಗೊಳಿಸುತ್ತಿದೆ. ಈ ಸರ್ಕಾರ ಸಂವೂರ್ಣವಾಗಿ ಅಸಂವಿಧಾನಿಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯಾಗಲಿದೆ. ಕನಿಷ್ಠ ವೇತನ ಮರೆಮಾಚಿ ಶೋಷಣೆ ಆರಂಭವಾಗುತ್ತದೆ. ಇದರಿಂದ ಈಗಿರುವ 58% ಮಹಿಳೆಯರ ಔದ್ಯೋಗಿಕ ಭಾಗವಹಿಸುವಿಕೆ, ಕ್ರಮೇಣ ಕಡಿಮೆಯಾಗಲಿದೆ. ತಮ್ಮ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಿದೆ ಎನ್ನುವ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಯೋಜನೆಗಳನ್ನು ರಾಜ್ಯ ಸರ್ಕಾರಗಳ ಇನುದಾನ ಪಾಲು ಹೆಚ್ಚಳ ಮಾಡುತ್ತಿರುವುದೇಕೆ?
ಕೇಂದ್ರ ಸರ್ಕಾರ ಗಾಂಧೀಜಿ ಅವರ ಹೆಸರು ತೆಗೆದಿದೆ ಎಂಬ ವಿಚಾರಕ್ಕೆ ಮಾತ್ರ ನಾವು ಇದನ್ನು ವಿರೋಧ ಮಾಡುತ್ತಿಲ್ಲ. ನಿಮಗೆ ಗಾಂಧಿಜಿ ಮೇಲೆ ದ್ವೇಷ ಇದೆ ಎಂದು ನಮಗೆ ಗೊತ್ತಿದೆ. ಆ ದ್ವೇಷವನ್ನು ನಮ್ಮ ಯುವ ಜನತೆ ಹಾಗೂ ಗ್ರಾಮೀಣ ಭಾಗದ ಜನರ ಮೇಲೆ ತೀರಿಸಿಕೊಳ್ಳುತ್ತಿರುವುದೇಕೆ? ನಿಮಗೆ ನಾಥುರಾಮ್ ಗೋಡ್ಸೆ ಇಷ್ಟವಾದರೆ, ಅವರ ಹೆಸರನ್ನೇ ಇಡಿ. ಜಿ ನಾಥುರಾಮ್ ಜಿ ಅಂತಲೇ ಹೆಸರಿಡಿ. ಆದರೆ, ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪಂಚಾಯ್ತಿ ಮಟ್ಟ ಬಲಪಡಿಸಿ, ಗ್ರಾಮಗಳ ಆಸ್ತಿ ಸೃಜನೆ ಮಾಡಿ.
ಮೋದಿ ಸರ್ಕಾರ ಬಂದ ನಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಯಾವ ಯೋಜನೆ ತಂದಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಈಗ, ಗ್ರಾಮೀಣ ಭಾಗದ ಜನರ ಜೀವನುಪಾಯ ಹಕ್ಕು ಕಸಿಯುತ್ತಿದ್ದಾರೆ. ರೈತರ ಕಾನೂನನ್ನು ಅವರು ಹೇಗೆ ಹಿಂಪಡೆದರೋ, ಇದನ್ನು ಅದೇ ರೀತಿ ಹಿಂಪಡೆಯಲಿದ್ದಾರೆ. ಹಳ್ಳಿಯಿಂದ ದೆಹಲಿಯವರೆಗೆ ಜನರಿಗೆ ಅಸಮಾಧಾನವಿದೆ. ಜನ ಬೀದಿಗಿಳಿಯುತ್ತಾರೆ. ಈ ಜನ ವಿರೋಧಿ ನೀತಿಯನ್ನು ನಮ್ಮ ಸರ್ಕಾರ ಖಂಡಿಸುತ್ತದೆ ಎಂದು ಕಿಡಿಕಾರಿದರು.