ಬೆಂಗಳೂರು: ಚಾಮರಾಜನಗರ ಜಿಲ್ಲೆ ಬಂಡೀಪುರ ಮರಳಳ್ಳ ಶಿಬಿರದ ಬಳಿ ಹುಲಿ ದಾಳಿಗೆ ಎಪಿಸಿ ವಾಚರ್ ಸಣ್ಣಹೈದ (56) ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ಸಣ್ಣ ಹೈದ ಅವರ ಕುಟುಂಬದೊಂದಿಗೆ ಇಲಾಖೆ ಮತ್ತು ಸರ್ಕಾರ ನಿಲ್ಲುತ್ತದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಅವರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರತಿಯೊಂದು ಜೀವವೂ ಅಮೂಲ್ಯ, ಪರಿಹಾರ ನೀಡುವುದರಿಂದ ಹೋದ ಪ್ರಾಣ ಮರಳಿ ಬರುವುದಿಲ್ಲ ಆದರೂ ಮೃತರ ಕುಟುಂಬಕ್ಕೆ ಆಸರೆಯಾಗಲು, ನಿಯಮಾನುಸಾರ ಮೃತರ ಕುಟುಂಬಕ್ಕೆ ಪರಿಹಾರ ಧನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಅರಣ್ಯ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಅರಣ್ಯದೊಳಗೆ ಗಸ್ತು ನಡೆಸುವಾಗ, ಕರ್ತವ್ಯ ನಿರ್ವಹಿಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಹೆಚ್ಚು ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ.
ವಾಚರ್ ಸಣ್ಣ ಹೈದ ಅವರ ಹತ್ತಿರದ ಬಂಧುಗಳಿಗೆ ವಿಮೆ ಪರಿಹಾರ ಮತ್ತು ಇಲಾಖೆ ನೀಡುವ ಪರಿಹಾರ ಇತ್ಯಾದಿ ಸೇರಿ ಒಟ್ಟಾರೆ 45 ಲಕ್ಷ ರೂ. ಪರಿಹಾರ ನೀಡುವಂತೆ ಸಚಿವರು ಸೂಚಿಸಿದ್ದಾರೆ.