ಬೆಂಗಳೂರು: ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವ ಕೋಗಿಲು ಫಕೀರ್ ಲೇಔಟ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೋಮವಾರ ಭೇಟಿ ನೀಡಿದ್ದು, "ಭೂ ಕಳ್ಳರ" ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇಂದು ಯಲಹಂಕ ಬಳಿಯ ಕೋಗಿಲು ಲೇಔಟ್ ನಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಸರ್ಕಾರ 9-10 ವರ್ಷಗಳಿಂದ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಕಸದ ಗುಂಡಿ ಇತ್ತು. ಆದರೆ ಅದರ ಮೇಲೆಯೇ ಕೆಲವರು ರಾತ್ರೋರಾತ್ರಿ ಬಂದು ಶೆಡ್ ನಿರ್ಮಿಸಿದ್ದಾರೆ ಎಂದರು.
ಯಾರೂ ಸಹ ಸರ್ಕಾರಿ ಭೂಮಿಗೆ ಮತದಾರರ ಚೀಟಿ ನೀಡಿಲ್ಲ. ಸ್ಥಳೀಯ ಶಾಸಕರು ಅದನ್ನು ತಮ್ಮ ಗಮನಕ್ಕೂ ತಂದಿದ್ದಾರೆ ಎಂದರು.
"ಅವರು ಕಸದ ರಾಶಿಯ ಮೇಲೆ ಎಲ್ಲಾ ಮನೆಗಳನ್ನು ನಿರ್ಮಿಸಿದ್ದಾರೆ, ಕೆಲವರು ರಾಜಕೀಯ ಮಾಡುತ್ತಿದ್ದಾರೆ... ಕೇರಳ ಸರ್ಕಾರ ಅಲ್ಪಸಂಖ್ಯಾತರಿಗೆ ಸಹಾನುಭೂತಿ ತೋರಿಸಲು ಹೊರಟಿದೆ, ಆದರೆ ಇಲ್ಲಿನ ನಿವಾಸಿಗಳು ನನ್ನ ಕಂಡ ಕೂಡಲೇ ಜೈಕಾರ ಹಾಕಿದರು. ನಮ್ಮದು ತಪ್ಪು ಇದ್ದರೆ ಧಿಕ್ಕಾರ ಕೂಗಬೇಕಿತ್ತು ಅಲ್ವಾ. ಯಾರಿಗೆ ತೊಂದರೆ ಆಗಿದೆಯೋ ಅವರಿಗೆ ನ್ಯಾಯ ಒದಗಿಸುತ್ತೇವೆ" ಎಂದರು.
ಪರಿಸ್ಥಿತಿಯನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಸಭೆಗೂ ಮೊದಲು ಸ್ಥಳ ಪರಿಶೀಲಿಸಲು ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, "ಭೂ ಕಳ್ಳರ" ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ಅರ್ಹ ತೆರವುದಾರರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಡಿಕೆ ಶಿವಕುಮಾರ್ ಈ ಹಿಂದೆ ಹೇಳಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಗೆ ಅಂತಹ ಕ್ರಮಗಳನ್ನು ಎಚ್ಚರಿಕೆಯಿಂದ ಕೈಗೊಳ್ಳಬೇಕಾಗಿತ್ತು ಎಂಬ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ, ಅವರು ಸಲಹೆಗಳನ್ನು ನೀಡಿದ್ದಾರೆ. ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದರು.
"ಕೆ.ಸಿ. ವೇಣುಗೋಪಾಲ್ ಅವರು ರಾಜ್ಯದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ನಮಗೆ ಸಲಹೆಗಳನ್ನು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ನೀಡುವುದಿಲ್ಲವೇ? ತೆರವುಗೊಂಡವರ ವಿವರಗಳು ನನ್ನ ಬಳಿ ಇವೆ. ಕಾನೂನು ಎಲ್ಲಾ ಸಮುದಾಯಗಳಿಗೂ ಒಂದೇ. ಸಿಎಂ ನಾಳೆ ಸಭೆ ಕರೆದಿದ್ದಾರೆ. ಒಬ್ಬ ವ್ಯಕ್ತಿ ಹಣ ಪಡೆದು ಸರ್ಕಾರಿ ಭೂಮಿಯಲ್ಲಿ ಶೆಡ್ ಹಾಕಲು ಜನರನ್ನು ಪ್ರೋತ್ಸಾಹಿಸಿದ್ದಾರೆ ಎಂಬ ವಿವರಗಳು ನನ್ನ ಬಳಿ ಇವೆ" ಎಂದು ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದರು.