ಬೆಂಗಳೂರು: ನವ ದಂಪತಿ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಶ್ರೀಲಂಕಾದಲ್ಲಿ ಹನಿಮೂನ್ ನಲ್ಲಿದ್ದಾಗ ಗಾನವಿ ಹಳೆ ಪ್ರೀತಿ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಈ ರಾದ್ದಾಂತವೇ ಎರಡು ಕುಟುಂಬಗಳ ಕಣ್ಣೀರಿಗೆ ಕಾರಣ ಎನ್ನಲಾಗುತ್ತಿದೆ. ಡಿಸೆಂಬರ್ 24 ರಂದು ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಾದ ಮೂರು ದಿನದಲ್ಲಿ ಡಿಸೆಂಬರ್ 28 ರಂದು ಆಕೆಯ ಪತಿ ಸೂರಜ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಾನವಿ ಆತ್ಮಹತ್ಯೆಗೆ ಮೃತ ಸೂರಜ್ ಕುಟುಂಬಸ್ಥರೇ ಕಾರಣ ಅಂತ ಆಕೆಯ ಹೆತ್ತವರು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. ಅಲ್ಲದೇ ಸೂರಜ್ ವಿರುದ್ಧ ವರದಕ್ಷಣೆ ಆರೋಪ ಕೂಡಾ ಮಾಡಲಾಗಿತ್ತು. ಅವಮಾನಕರ ಹೇಳಿಕೆಗಳಿಂದ ಮನನೊಂದು ಸೂರಜ್ ಹಾಗೂ ಅವರ ತಾಯಿ ಹಾಗೂ ಸಹೋದರ ಸುಮಾರು 1,000 ಕಿಲೋ ಮೀಟರ್ ದೂರ ಇರುವ ನಾಗಪುರಕ್ಕೆ ಹೋಗಿದ್ರು. ಅಲ್ಲಿ ಮನನೊಂದಿದ್ದ ಸೂರಜ್ ಸೂಸೈಡ್ ಮಾಡಿಕೊಂಡಿದ್ದರು. ಅವರ 60 ವರ್ಷದ ತಾಯಿ ಜಯಂತಿ ಶಿವಣ್ಣ ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ, ಬದುಕುಳಿದಿದ್ದಾರೆ.
10 ದಿನಗಳ ಹನಿಮೂನ್ ಅರ್ಧಕ್ಕೆ ಅಂತ್ಯ!
ಸೂರಜ್ ಶಿವಣ್ಣ ಹಾಗೂ ಗಾನವಿ ಅಕ್ಟೋಬರ್ 29 ರಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ನವ ವಿವಾಹಿತ ಜೋಡಿ ಶ್ರೀಲಂಕಾಕ್ಕೆ10 ದಿನಗಳ ಹನಿಮೂನ್ ಗೆ ತೆರಳಿತ್ತು. ಆದರೆ, ಅಲ್ಲಿ ಗಾನವಿ ಮದುವೆಗೂ ಮುನ್ನಾ ಬೇರೆ ಯುವಕನ ಜೊತೆಗೆ ಇದ್ದ ಸಂಬಂಧದ ಬಗ್ಗೆ ಹೇಳಿಕೊಂಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದಿದೆ. ಈ ವೇಳೆ ಸೂರಜ್ ಜೊತೆಗೆ ಮುಂದುವರೆಯಲು ಇಷ್ಟವಿಲ್ಲ ಎಂದು ಗಾನವಿ ಹೇಳಿದ್ದಾಳೆ ಎನ್ನಲಾಗಿದೆ. ನಂತರ 10 ದಿನಗಳ ಹನಿಮೂನ್ ಅರ್ಧಕ್ಕೆ ಐದನೇ ದಿನಕ್ಕೆ ಮುಗಿದಿದ್ದು, ಇಬ್ಬರು ಶ್ರೀಲಂಕಾದಿಂದ 25 ರ ಬದಲು ಡಿಸೆಂಬರ್ 21 ರಂದು ವಾಪಸ್ ಆಗಿದ್ರು.
ರಾಜಿ ಪಂಚಾಯಿತಿ ವಿಫಲ: ಸೂರಜ್ ಮತ್ತು ಗಾನವಿ ಬೆಂಗಳೂರಿಗೆ ಮರಳಿದ ನಂತರ ಕುಟುಂಬಸ್ಥರು ರಾಜಿ ಪಂಚಾಯಿತಿ ಮಾಡಿದ್ದಾರೆ. ಆದರೆ ಯಾವುದು ವರ್ಕ್ ಔಟ್ ಆಗಿಲ್ಲ. ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ. ಆದರೆ ಅವರು ಕೇಳಲಿಲ್ಲ ಎಂದು ಸೂರಜ್ ಅವರ ಹಿರಿಯ ಸಹೋದರ ಸಂಜಯ್ ಶಿವಣ್ಣ ತಿಳಿಸಿದ್ದಾರೆ. ಡಿಸೆಂಬರ್ 24 ರಂದು ಅಪ್ಪನ ಮನೆಗೆ ಹೋದ ಗಾನವಿ ನೇಣು ಬಿಗಿದುಕೊಂಡಿದ್ದಾಳೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಸಾವನ್ನಪ್ಪಿದ್ದಾಳೆ.
ಸೂರಜ್ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ:
ಬಳಿಕ ಸೂರಜ್ ಮತ್ತು ಆತನ ಸಂಬಂಧಿಕರು ವರದಕ್ಷಣೆಗಾಗಿ ಪೀಡಿಸಿದ್ದಾರೆ ಎಂದು ಆಕೆಯ ಆಕೆಯ ಕುಟುಂಬದವರು ಆರೋಪಿಸಿದ್ದು, ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿ ಮಹಿಳೆಯ ಕುಟುಂಬಸ್ಥರು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಸುಮಾರು 30 ಮಂದಿ ಸೂರಜ್ ಅವರ ಮನೆ ಮೇಲೆ ಮುತ್ತಿಗೆ ಹಾಕಿದ್ದು, ಆತನಿಗಾಗಿ ಹುಡುಕಾಟ ನಡೆಸಿದರು. ಇದರಿಂದ ಭಯಭೀತಿಯಲ್ಲಿ ಬೆಂಗಳೂರಿನಿಂದ ತಪ್ಪಿಸಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ ಎಂದು ಸಂಜಯ್ ಸೂರಜ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವರದಕ್ಷಿಣೆ ಆರೋಪವನ್ನು ತಳ್ಳಿಹಾಕಿರುವ ಸಂಜಯ್, ಅಂತಹ ಯಾವುದೇ ಬೇಡಿಕೆಯನ್ನು ನಾವು ಮಾಡಿಲ್ಲ. ಮದುವೆ ಖರ್ಚನೆಲ್ಲಾ ನಾವೇ ಮಾಡಿದ್ದೇವು. ಈಗಿರುವಾಗ ಇಂತಹ ಆರೋಪ ಮಾಡುತ್ತಿರುವುದು ಆಘಾತ ಮೂಡಿಸಿದೆ. ಅಲ್ಲದೇ ಗಾನವಿ ಮನೆಯವರು ಕೊಲೆ ಬೆದರಿಕೆ ಹಾಕಲು ಆರಂಭಿಸಿದ್ದರು. ಭಯಗೊಂಡು ಸೂರಜ್ ಕ್ಷಮೆಯಾಚಿಸಿದ ಎಂದು ಅವರು ತಿಳಿಸಿದ್ದಾರೆ.
ಸೂರಜ್ ಆತ್ಮಹತ್ಯೆ: ಡಿಸೆಂಬರ್ 23 ರಂದು, ಸೂರಜ್, ಅವರ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಹೈದರಾಬಾದ್‌ಗೆ ಹೋಗಿದ್ದಾರೆ. ಮರುದಿನ ಅವರು ನಾಗ್ಪುರಕ್ಕೆ ತೆರಳಿದ್ದು, ಶುಕ್ರವಾರ ತಡರಾತ್ರಿ ಮಹಾರಾಷ್ಟ್ರದ ನಾಗ್ಪುರದ ಸೋನೆಗಾಂವ್ ಪೊಲೀಸ್ ವ್ಯಾಪ್ತಿಯ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಅವರು ಕಾಯ್ದಿರಿಸಿದ್ದಾರೆ. ಮಧ್ಯರಾತ್ರಿಯ ನಂತರ ದುರಂತ ಸಂಭವಿಸಿದೆ. ಸೂರಜ್ ದುಪಟ್ಟಾ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಶನಿವಾರ ಮಧ್ಯರಾತ್ರಿ 12.30ರ ಸುಮಾರಿಗೆ ಆತನ ತಾಯಿ ಜಯಂತಿ ಪತ್ತೆಯಾಗಿದ್ದಾರೆ. ಆಘಾತಕ್ಕೊಳಗಾದ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ನೇಣಿಗೆ ಕೊರಳೊಡ್ಡಿ ಬದುಕುಳಿದಿದ್ದಾರೆ. ಅವರು ಅಲಾರಾಂ ಒತ್ತಿ, ಹೋಟೆಲ್ ಸಿಬ್ಬಂದಿ ಮತ್ತು ಸಂಜಯ್‌ಗೆ ಮಾಹಿತಿ ನೀಡಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಸೂರಜ್‌ನನ್ನು ಕೂಡಲೇ ನಾಗ್ಪುರದ ಏಮ್ಸ್‌ಗೆ ಸಾಗಿಸಲಾಯಿತಾದರೂ ಅಲ್ಲಿ ಬೆಳಿಗ್ಗೆ 3 ಗಂಟೆಯ ಸುಮಾರಿಗೆ ಆತ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಸೂರಜ್ ಶಿವಣ್ಣ ಹೋಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಮಗನ ಸಾವಿನ ಸುದ್ದಿ ತಿಳಿದ ನಂತರ, ಅವರ ತಾಯಿ ಜಯಂತಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಸೋನೆಗಾಂವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ನಿತಿನ್ ಮಾಗರ್ ಮಾಹಿತಿ ನೀಡಿದ್ದಾರೆ. ನಾಗ್ಪುರ ಪೊಲೀಸರು ಸದ್ಯಕ್ಕೆ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬೆಂಗಳೂರು ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.
ಗಾನವಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ಬಾಕಿ ಉಳಿದಿದೆ. ಸೂರಜ್ ಶವ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ. ಕೇವಲ ಆರು ವಾರಗಳ ಸೂರಜ್ ಮತ್ತು ಗಾನವಿ ಮದುವೆ ಇಬ್ಬರ ಸಾವಿನೊಂದಿಗೆ ಅಂತ್ಯಗೊಂಡಿದೆ. ತನಿಖೆ ನಡೆಯುತ್ತಿದ್ದು, ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.