ಡಿಕೆ.ಶಿವಕುಮಾರ್ 
ರಾಜ್ಯ

ನಾನೂ ಕೂಡ OBCನೇ... ಒಕ್ಕಲಿಗ OBC ಅಲ್ಲವೇ?: ಡಿಕೆ.ಶಿವಕುಮಾರ್ ಪ್ರಶ್ನೆ

ಹೇ.. ಸುಮನಿರಪ್ಪ. ಯಾವ ಒಬಿಸಿಯೂ ಇಲ್ಲ. ನಾನು ಒಬಿಸಿನೇ. ಒಕ್ಕಲಿಗರು, ಲಿಂಗಾಯಿತರು, ಆದಾಯ ಇಲ್ಲದ ಬ್ರಾಹಣರು ಕೂಡ ಒಬಿಸಿಗಳೇ.

ಬೆಂಗಳೂರು: ನಾನೂ ಕೂಡ ಒಬಿಸಿ ವರ್ಗಕ್ಕೆ ಸೇರಿದವನೇ... ಒಕ್ಕಲಿಗ ಸಮುದಾಯ ಒಬಿಸಿಗೆ ಸೇರಿದ್ದಲ್ಲವೇ? ಎಂದು ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಪ್ರಶ್ನಿಸಿದ್ದು, ಈ ಮೂಲಕ ಸಿದ್ದರಾಮಯ್ಯ ಮಾತ್ರ ಹಿಂದುಳಿದ ನಾಯರಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರರು, "ನಾನು ಕೂಡ ಒಬಿಸಿ ಎಂದು ನಿಮಗೆ ತಿಳಿದಿದೆಯೇ; ಒಕ್ಕಲಿಗ ಒಬಿಸಿ ಅಲ್ಲವೇ? ಲಿಂಗಾಯತರು ಒಬಿಸಿ, ಆದಾಯವಿಲ್ಲದ ಬ್ರಾಹ್ಮಣರು ಒಬಿಸಿಗೆ ಸೇರಿದವರಾಗಿದ್ದಾರೆಂದು ಹೇಳಿದರು.

ಇದೇ ವೇಳೆ ಮುಂದಿನ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ ಬರುವ ಐದು ನಿಗಮಗಳಿಗೆ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಬಯಸುವ ಆಕಾಂಕ್ಷಿಗಳಿಂದ ಪಕ್ಷವು ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆಗೆ ಸೂಚನೆ

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೆಚ್ಚು ದಿನ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಮೀಸಲಾತಿ ಹಾಗೂ ನ್ಯಾಯಾಲಯದಲ್ಲಿರುವ ತಗಾದೆಗಳನ್ನು ಎರಡು ಮೂರು ತಿಂಗಳ ಒಳಗಾಗಿ ಇತ್ಯರ್ಥಪಡಿಸಿ ಚುನಾವಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಅದೇ ಸಂದರ್ಭದಲ್ಲಿ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿನ 5 ಪಾಲಿಕೆಗಳ 369 ವಾರ್ಡ್‌ಗಳ ಸದಸ್ಯರ ಆಯ್ಕೆಗೂ ಚುನಾವಣೆ ನಡೆಯಲಿದೆ ಎಂದು ಹೇಳಿದರು.

ಮೀಸಲಾತಿ ನಿಗದಿಯಾದ ಬಳಿಕ ಚುನಾವಣೆಯ ಬಿ-ಫಾರಂಗಾಗಿ ಪಕ್ಷಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಯಾರು ಕಾಯುತ್ತಾ ಕುಳಿತು ಕೊಳ್ಳುವಂತಿಲ್ಲ. ಇಂದಿನಿಂದಲೇ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಜನವರಿ 15ಕ್ಕೆ ಮುಕ್ತಾಯಗೊಳ್ಳಲಿದೆ. ಸಾಮಾನ್ಯ ವರ್ಗದವರು 50 ಸಾವಿರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 25 ಸಾವಿರ ಪಾವತಿಸಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಅರ್ಜಿಯೊಂದಿಗೆ ಸ್ವೀಕರಿಸಲಾಗುತ್ತಿರುವ ಹಣವನ್ನು ಪಕ್ಷದ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಚೇರಿಗೆ 70 ಕೋಟಿ, ಜಿಲ್ಲಾ ಮಟ್ಟದ ಕಚೇರಿಗೆ 20 ಕೋಟಿ ವೆಚ್ಚ ಮಾಡಬೇಕಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಿಂದ ತಲಾ ಎರಡು ಲಕ್ಷದಂತೆ ಒಟ್ಟು 20 ಕೋಟಿ ಸಂಗ್ರಹಿಸಿ ಅದರಲ್ಲಿ ಈಗಿರುವ ಭವನವನ್ನು ಪೂರ್ಣಗೊಳಿಸಲಾಯಿತು. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ನನಗೆ ಹಣ ನೀಡಬೇಡಿ. ಕಟ್ಟಡ ನಿರ್ಮಾಣಕ್ಕೆ ಕೊಡಿ ಎಂದು ಕೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರಿಂದ ತಮಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಬೇಕು ಎಂಬ ಬೇಡಿಕೆ ಬಂದಾಗ, ಅದೆಲ್ಲ ಸಾಧ್ಯವಿಲ್ಲ. ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ಗೊತ್ತಿದೆ. ಇಷ್ಟ ಇದ್ದವರು ಅರ್ಜಿ ಹಾಕಿ, ಇಲ್ಲದಿದ್ದರೆ ಬೇಡ ಎಂದು ನಿಷ್ಠೂರವಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಒಬಿಸಿ ವರ್ಗಕ್ಕೂ ಶುಲ್ಕ ವಿನಾಯಿತಿ ನೀಡಬೇಕು ಎಂದು ಕೆಲವರು ಮನವಿ ಮಾಡಿದಾಗ, ಹೇ.. ಸುಮನಿರಪ್ಪ. ಯಾವ ಒಬಿಸಿಯೂ ಇಲ್ಲ. ನಾನು ಒಬಿಸಿನೇ. ಒಕ್ಕಲಿಗರು, ಲಿಂಗಾಯಿತರು, ಆದಾಯ ಇಲ್ಲದ ಬ್ರಾಹಣರು ಕೂಡ ಒಬಿಸಿಗಳೇ ಎಂದು ಹೇಳಿದರು.

ಈ ಹಿಂದೆ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆದು ನಾಯಕತ್ವ ಸೃಷ್ಟಿಯಾಗುತ್ತಿತ್ತು. ಕೆ.ಎಚ್‌.ರಂಗನಾಥ್‌ ಅವರು ಸಚಿವರಾಗಿದ್ದಾಗ, ಶಿಕ್ಷಣ ಸಂಸ್ಥೆಗಳಲ್ಲಿ ಗಲಾಟೆಗಳಾಗುತ್ತವೆ ಎಂದಬ ಕಾರಣಕ್ಕೆ ಕಾಲೇಜು ಚುನಾವಣೆಗಳನ್ನು ರದ್ದು ಮಾಡಿದ್ದರು. ಈಗ ರಾಹುಲ್‌ ಗಾಂಧಿಯವರು ನನಗೆ ಮತ್ತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಯುವ ನಾಯಕತ್ವ ಬೆಳೆಸಲು ಕಾಲೇಜುಗಳಲ್ಲಿ ಚುನಾವಣೆ ನಡೆಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಇದನ್ನು ರಾಜ್ಯಾದ್ಯಂತ ಸಂಭ್ರಮಿಸಬೇಕಿದೆ. ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಬೇಕು ಎಂದು ಹೇಳಿದರು.

ಮತಗಳ್ಳತನದ ವಿರುದ್ಧ ಪಂಚಾಯಿತಿ ಮಟ್ಟದಲ್ಲಿ ಜನವರಿ 5ರಿಂದ ಪ್ರತಿಭಟನೆಗಳಾಗಬೇಕಿದೆ. ಸರ್ಕಾರ ವಿವಿಧ ಸಮಿತಿಗಳಿಗೆ ತಾಲೂಕುವಾರು ಇನ್ನೂರಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಮಾಡಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರಾಗಿದ್ದವರು ಕೈ ಜೋಡಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು. ಹಾಗೆಯೇ ಗ್ಯಾರಂಟಿ ಸಂಭ್ರಮದಲ್ಲೂ ಭಾಗವಹಿಸಿ ಆಚರಿಸಿ ಜನ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘Parivar together’: ಪಿಂಪ್ರಿ-ಚಿಂಚ್‌ವಾಡ್ ಪಾಲಿಕೆ ಚುನಾವಣೆ; ಶರದ್ ಪವಾರ್ ಜೊತೆ ಮೈತ್ರಿ ಘೋಷಿಸಿದ ಅಜಿತ್ ಪವಾರ್!

'ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿದ್ದಾರೆ: ಮುಕ್ಕಾಲು ಪ್ರಪಂಚ ಗೆದ್ದ ಅಲೆಕ್ಸಾಂಡರ್ ಶಾಶ್ವತ ಇರಲಿಲ್ಲ, ಸದ್ದಾಂ ಹುಸೇನ್ ಅವಿತುಕೊಂಡ'

ವೈಕುಂಠ ಏಕಾದಶಿ ಯಾವಾಗ: ವ್ರತ ಮಹಿಮೆ ಏನು; ಏಕಾದಶಿಯಂದೇ ವೈಕುಂಠ ದ್ವಾರ ತೆರೆಯುವುದೇಕೆ?

ರೋಹಿಣಿ ನಕ್ಷತ್ರದವರಿಗೆ ಕೃಷ್ಣನಂತೆ ಅನೇಕ ಪತ್ನಿಯರು ಇರ್ತಾರಾ: ಪುನರ್ವಸು ನಕ್ಷತ್ರದಲ್ಲಿ ಜನಿಸಿದರೆ ರಾಮನಂತೆ ವನವಾಸವೇ?

ಚಿತ್ರದುರ್ಗ ಬಸ್ ದುರಂತ: DNA ವರದಿ ಆಧರಿಸಿ ಕುಟುಂಬಗಳಿಗೆ ಮೃತದೇಹ ಹಸ್ತಾಂತರ

SCROLL FOR NEXT