ಬೆಂಗಳೂರು: ಪ್ರತಿನಿತ್ಯ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಸೈಕೋ ಪತಿಯ ವಿರುದ್ಧ ಆತನ ಪತ್ನಿಯೇ ಪೊಲೀಸ್ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮದುವೆಯಾದ ಮೂರೇ ತಿಂಗಳಲ್ಲಿ ಪತಿಯ ಕಾಟಕ್ಕೆ ಬೆಚ್ಚಿಬಿದ್ದಿರುವ ಮಹಿಳೆ ಆತನ ಅಶ್ಲೀಲ ಹಾಗೂ ಅಸಹಜ ವರ್ತನೆ ವಿರೋಧಿಸಿ ಕೊನೆಗೂ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ್ದಾರೆ.
ವಯಸ್ಸು ಮುಚ್ಚಿಟ್ಟು ಮದುವೆಯಾದ ಪತಿ, ಲೈಂಗಿಕ ಕಿರುಕುಳ ನೀಡಿ, ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಮಾಡಲು ಒತ್ತಾಯಿಸುತ್ತಿದ್ದ. ಪತ್ನಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ.
ಸಂತ್ರಸ್ತ ಮಹಿಳೆ ಮತ್ತು ಆರೋಪಿತ ಪತಿ ಮಂಜುನಾಥ್ ಇಬ್ಬರೂ ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳಾಗಿದ್ದರು. ಇಬ್ಬರೂ HR ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು. ಯುವತಿ ಕುಟುಂಬದ ಒಪ್ಪಿಗೆ ಪಡೆದು, 2025ರ ಸೆಪ್ಟೆಂಬರ್ 3ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿತ್ತು.
ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಮಂಜುನಾಥನ ನಿಜ ಸ್ವರೂಪ ಬಯಲಾಗಿತ್ತು. ಸಂತ್ರಸ್ಥೆ ಆರೋಪಿಸಿರುವಂತೆ ಆರಂಭದಲ್ಲಿ ಸಾಮಾನ್ಯವಾಗಿದ್ದ ಗಂಡನ ವರ್ತನೆ, ದಿನದಿಂದ ದಿನಕ್ಕೆ ವಿಚಿತ್ರ, ಅಶ್ಲೀಲ ಮತ್ತು ಅಸ್ವಸ್ಥ ರೀತಿಗೆ ತಿರುಗಿತ್ತು.
ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿ ಕಿರುಕುಳ
ಇನ್ನು ಪತಿ ಮಂಜುನಾಥ್ ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ವೀಕ್ಷಿಸಿ, ಅದೇ ರೀತಿಯ ಲೈಂಗಿಕ ಕ್ರಿಯೆಗಳನ್ನು ಮಾಡಲು ಪತ್ನಿಗೆ ಒತ್ತಾಯಿಸುತ್ತಿದ್ದ. ಪೀರಿಯಡ್ಸ್ ಟೈಮ್‌ನಲ್ಲೂ ಸೆಕ್ಸ್ ಮಾಡಬೇಕು ಅಂತಿದ್ದ. ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಯತ್ನ ಹಾಗೂ ಮಾನಸಿಕ ಹಿಂಸೆ ನಡೆಸುತ್ತಿದ್ದನು ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.
ಮಾತ್ರವಲ್ಲದೇ ಮನೆಯೊಳಗೆ ಅತ್ತೆ ಮಾವ ಇದ್ದರೂ ಮಂಜುನಾಥ ಅಂಡರ್‌ವೇರ್‌ನಲ್ಲೇ ಅಥವಾ ಸಂಪೂರ್ಣ ಬೆತ್ತಲೆಯಾಗಿ ಓಡಾಡುತ್ತಿದ್ದನೆಂದು ಸಂತ್ರಸ್ತೆ ಹೇಳಿದ್ದು, ಮನೆಯ ಹೊರಗೆ ಇದೇ ರೀತಿ ವರ್ತಿಸಿ, ಅಕ್ಕಪಕ್ಕದವರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದ್ದ.
ಮಂಜುನಾಥನಿಗೆ ಉದ್ಯೋಗ ಇರಲಿಲ್ಲ. ಆಕೆಯೇ ಶಿಫಾರಸು ನೀಡಿ HR ಮ್ಯಾನೇಜರ್ ಹುದ್ದೆಗೆ ನೇಮಕ ಮಾಡಿಸಿದ್ದಳು. ಲಕ್ಷಾಂತರ ರೂಪಾಯಿ ಸಂಬಳ ದೊರಕುವಂತೆ ಮಾಡಿದ್ದಷ್ಟೇ ಅಲ್ಲದೆ, ಮದುವೆಯ ನಂತರ ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು, ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತ್ನಿ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್
ಮಾತ್ರವಲ್ಲದೇ ಮಂಜುನಾಥ್ ಪತ್ನಿಯ ಫೋಟೋಗಳನ್ನು ಆಕೆಯ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಅವಮಾನ ಮಾಡಿದ್ದಾನೆ ಎನ್ನಲಾಗಿದೆ. ಮನೆ ಬಿಟ್ಟು ಹೋಗಿದ್ದ ಮಂಜುನಾಥ, ನಂತರ ಮತ್ತೆ ಬಂದು ಗಲಾಟೆ ಮಾಡಿ, ಪತ್ನಿ ಮತ್ತು ಆಕೆಯ ತಾಯಿಗೆ ಅಶ್ಲೀಲವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾನೆ. ಈ ಎಲ್ಲ ಕೃತ್ಯಗಳಿಗೆ ಅತ್ತೆ-ಮಾವನೂ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಕೇಸ್ ವಾಪಸ್ ಪಡೆದ್ರೆ 5 ಲಕ್ಷ ರೂ ಹಣ
ಆತ ಹಾಗೂ ಆತನ ಮನೆಯವರ ಮೇಲೆ ಕೇಸ್ ಹಾಕಿದ್ದಕ್ಕೆ ಮನೆ ಮುಂದು ಬಂದು ಜಗಳ ಮಾಡುತ್ತಿದ್ದ. ಕೇಸ್ ವಾಪಾಸ್ ತೆಗೆದುಕೊಂಡರೆ 5 ಲಕ್ಷ ಹಣ ಕೊಡೋದಾಗಿ ಹೇಳಿದ್ದ. ಆದ್ರೆ ಆತನ ಆಮಿಷಕ್ಕೆ ನಾನು ಒಪ್ಪಿಲ್ಲ. ನಾನೂ ಕೂಡ ಚೆನ್ನಾಗಿ ದುಡಿಯುತ್ತಿದ್ದೇನೆ. ಆತ ಮನಿಟ್ರ್ಯಾಪ್ ಮಾಡುತ್ತಿರುವುದಾಗಿ ಆರೋಪ ಮಾಡಿದ್ದಾನೆ. ಮನಿಟ್ರ್ಯಾಪ್ ಮಾಡಿರೋದು ಯಾರು? ಹಣ ಇಲ್ಲದೇ ಇರೋದು ಅದನ್ನ ಮಾಡ್ತಾರೆ. ಆದ್ರೆ ಅವನಿಗೆ ಕೆಲಸ ಕೊಡಿಸಿರೋದೇ ನಾನು. ಮ್ಯಾನೇಜರ್ ಪೋಸ್ಟಿಂಗ್ ಮಾಡಿಸಿರೋದು ಕೂಡ ನಾನೇ. ಹೀಗಿರುವಾಗ ನಾನು ಹೇಗೆ ಮನಿಟ್ರ್ಯಾಪ್ ಮಾಡೋಕೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ಮೂರನೇ ಮದುವೆ
ಇದು ನನ್ನ ಮೂರನೇ ಮದುವೆ. ನಾನು ಈ ಹಿಂದೆ ಎರಡು ಮದುವೆಯಾಗಿರುವ ವಿಚಾರ ಕೂಡ ಆತನಿಗೆ ಗೊತ್ತಿತ್ತು. ಮದುವೆ ಆದ ಬಳಿಕ ಇದೇ ವಿಚಾರ ಹೇಳಿ ಕಿರುಕುಳ ನೀಡುತ್ತಿದ್ದ. ನನ್ನ 2ನೇ ಮದುವೆ ಡೈವೋರ್ಸ್ ಆಗಲು ಇವನೇ ಕಾರಣ ಎಂದು ಹೇಳಿದ್ದಾರೆ. 25 ಲಕ್ಷದ ಚಿನ್ನ ಕೊಟ್ಟಿರೋದಾಗಿ ಹೇಳಿದ್ದಾನೆ. ಅದರ ಸಾಕ್ಷಿ ಆತ ನನಗೆ ತೋರಿಸಬೇಕು ಎಂದು ಯುವತಿ ಹೇಳಿದ್ದಾರೆ.
ಸದ್ಯ ಈ ಕುರಿತು ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆರೋಪಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.