ಸಿಎಂ ಸಿದ್ದರಾಮಯ್ಯ 
ರಾಜ್ಯ

Kogilu layout Demolition: ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡಲಾಗುವುದು; ಸಿಎಂ ಸಿದ್ದರಾಮಯ್ಯ

ಇನ್ನು ಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ‌ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ.

ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿವಾಸಿಗಳ ತೆರವು ಕಾರ್ಯಾಚರಣೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ಗಳನ್ನು ನಿರ್ಮಾಣ ಮಾಡಿದ್ದ ಸುಮಾರು 167 ಶೆಡ್‌ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು. ಸರ್ಕಾರದ ಜಾಗವಾಗಿದ್ದರಿಂದ ಅವರೆಲ್ಲರಿಗೂ ನೋಟಿಸ್ ನೀಡಿ, ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು, ಆದರೂ ಅವರು ಖಾಲಿ ಮಾಡಿರಲಿಲ್ಲ. ಅನಿವಾರ್ಯವಾಗಿ ತೆರವು ಮಾಡಲಾಗಿದೆ ಎಂದು ಹೇಳಿದರು.

ನಿನ್ನೆ ನಾನು ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ನನ್ನ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್ ಅವರನ್ನು ಸ್ಥಳಕ್ಕೆ ಕಳಿಸಿಕೊಟ್ಟಿದ್ದೆ. ಇಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕೂಡ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದಾರೆ. ಕಸ ವಿಲೇವಾರಿ ಮಾಡುವ ಉದ್ದೇಶಕ್ಕೆ 15 ಎಕರೆ ಈ ಜಮೀನನ್ನು ಜಿಲ್ಲಾಧಿಕಾರಿಗಳು ನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು. ಪಾಲಿಕೆಯವರು ಕಸ ಹಾಕುತ್ತಿದ್ದು, ಭೂಮಿ‌ ಅವರ ಸ್ವಾಧೀನದಲ್ಲೇ ಇದೆ.

ಸುಮಾರು 2020-21 ರಿಂದ ಈ ರೀತಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡು ವಾಸ ಮಾಡುತ್ತಿದ್ದರು, ಹೀಗಾಗಿ ಅಲ್ಲಿನ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ತಹಶಿಲ್ದಾರರಿಗೆ, ಶಿರಸ್ಥೆದಾರರಿಗೆ ಗೊತ್ತಿಲ್ಲದೆ ಹೀಗೆ ಒತ್ತುವರಿ ಆಗಲು ಸಾಧ್ಯವಿಲ್ಲ. ಇನ್ನುಮುಂದೆ ಇಂತಹ ಘಟನೆ ಮರುಕಳಿಬಾರದು ಎಂಬ ಕಾರಣಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆಂದು ತಿಳಿಸಿದರು.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ‌ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ. ಅಕ್ರಮವಾಗಿ ಶೆಡ್‌ಗಳನ್ನು ಕಟ್ಟಿ ವಾಸವಿದ್ದವರಲ್ಲಿ ಮುಂದಿನ ಎರಡು ದಿನಗಳಲ್ಲಿ ಅರ್ಹರನ್ನು ಗುರುತಿಸಿ, ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದರು.

ಅಕ್ರಮ ಶೆಡ್‌ಗಳ ತೆರವುಗೊಳಿಸಿದ ವಿಚಾರದ ಬಗ್ಗೆ ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ಅವರು ನನ್ನೊಂದಿಗೆ ಮತ್ತು ನಂತರ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಊಟ, ವಸತಿ, ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದೆ, ಅದರಂತೆ ಮೂರು ಕಡೆ ಈ ರೀತಿಯ ವ್ಯವಸ್ಥೆ ಮಾಡಿದ್ದರೂ ಅಲ್ಲಿನ ನಿವಾಸಿಗಳು ಹೋಗಿಲ್ಲ.

ಡಿ.ಕೆ.ಶಿವಕುಮಾರ್, ವಸತಿ ಸಚಿವರಾದ ಜಮೀರ್ ಅಹ್ಮದ್, ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡ ಅವರ ಜೊತೆ ಮಾತನಾಡಿ, ಪರ್ಯಾಯ ವ್ಯವಸ್ಥೆ ಮಾಡುವ ಸಂಬಂಧ ಚರ್ಚಿಸಿದ್ದೇನೆ. ಅಲ್ಲೇ ಸಮೀಪದ ಬೈಯ್ಯಪ್ಪನಹಳ್ಳಿಯ ಸರ್ವೇ ನಂ‌.23 ರಲ್ಲಿ ಸುಮಾರು 1,087 ಮನೆಗಳಿವೆ, ಅಧಿಕಾರಿಗಳಿಂದ ಅರ್ಹರ ಪಟ್ಟಿ ಬಂದ ನಂತರ ಅವರಿಗೆ ಬೈಯ್ಯಪ್ಪನಹಳ್ಳಿಯ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆ ಮಾಡುತ್ತೇವೆ. ಇದು ಕೋಗಿಲು ಇಂದ ಕೇವಲ 7 ಕಿ.ಮೀ ದೂರದಲ್ಲಿದೆ.

ಒಂದು ಮನೆಗೆ ಸುಮಾರು ರೂ.11.20 ಲಕ್ಷ ವೆಚ್ಚವಾಗಿದ್ದು, ಇವನ್ನು ಕೊಡುತ್ತೇವೆ. ಸಾಮಾನ್ಯವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಬ್ಸಿಡಿ ಲಭ್ಯವಿದೆ, ಜೊತೆಗೆ ಜಿಬಿಎ ಇಂದ ಪ್ರತಿ ಮನೆಗೆ 5 ಲಕ್ಷ ರೂಪಾಯಿ ನೀಡುವಂತೆ ಸೂಚಿಸಿದ್ದೇನೆ. ಜನರಲ್‌ಗೆ ಎಲ್ಲಾ ಸಬ್ಸಿಡಿ ಸೇರಿ 8 ಲಕ್ಷದ 70 ಸಾವಿರ ರೂಪಾಯಿ ಬರುತ್ತದೆ. ಎಸ್‌ಸಿ/ಎಸ್‌ಟಿ ಗಳಾದರೆ 9.50 ಲಕ್ಷ ಬರುತ್ತದೆ. ಆಮೇಲೆ ಜನರಲ್‌ಗೆ 2.5 ಲಕ್ಷವನ್ನು ಸಾಲದ ರೂಪದಲ್ಲಿ ಕೊಡತಕ್ಕದ್ದು. ಎಸ್‌ಸಿಎಸ್‌ಟಿಗೆ 1.70 ಲಕ್ಷ ಸಾಲ ಬರುತ್ತದೆ. ಇದನ್ನು ಜಮೀರ್‌ ಅಹ್ಮದ್‌ ಖಾನ್‌ ಅವರು ಸಾಲ ಕೊಡಿಸುವುದಾಗಿ ಹೇಳಿದ್ದಾರೆ.

ನಾಳೆ, ನಾಡಿದ್ದು ಎರಡು ದಿನ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಜನವರಿ 1ರಂದು ಹೊಸ ವರ್ಷ ಪ್ರಾರಂಭದ ದಿನ ಇವರಿಗೆ ವಾಸಕ್ಕೆ ಮನೆಯನ್ನು ಒದಗಿಸಿಕೊಡುವ ಜವಾಬ್ದಾರಿಯನ್ನು ವಸತಿ ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ವಹಿಸಲಾಗಿದೆ. ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ, ಮಾನವೀಯತೆ ದೃಷ್ಟಿಯಿಂದ ಅವರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. 1 ಲಕ್ಷ ಮನೆಗಳನ್ನು ನಾವು ಕಟ್ಟಿಸಿರುವುದೇ ಬಡವರಿಗೆ ಸೂರು ಒದಗಿಸಿಕೊಡಲೆಂದು.

ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡುವುದು ಇದೊಂದು ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ. ಅಕ್ರಮವಾಗಿ ಶೆಡ್ ನಿರ್ಮಿಸಲು ಬಿಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಇಂತಹ ಅಕ್ರಮ ನಡೆದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJPಗೊಂದು ಅವಕಾಶ ಕೊಡಿ, ಭ್ರಷ್ಟಾಚಾರ-ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಬಂಗಾಳ ಜನತೆಗೆ ಅಮಿತ್ ಶಾ ಮನವಿ

Bengaluru: 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್‌ಗೆ ಹಸಿರು ನಿಶಾನೆ ತೋರಿದ Ram Mohan Naidu

ಕೋಗಿಲು ಮನೆಗಳ ತೆರವು ಕೇಸ್​ಗೆ ಟ್ವಿಸ್ಟ್: 2016ರ ಮೊದಲು ಇಲ್ಲಿ ಮನೆಗಳೇ ಇರಲಿಲ್ಲ, ನಿವಾಸಿಗಳ ಆರೋಪಕ್ಕೆ ಸ್ಯಾಟಲೈಟ್ ಫೋಟೋ ಮೂಲಕ GBA ತಿರುಗೇಟು..!

ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ತಿಮ್ಮಪ್ಪನ ದರ್ಶನಕ್ಕೆ ದೇವಸ್ಥಾನಗಳಲ್ಲಿ ಭಕ್ತ ಸಾಗರ; ಹಲವೆಡೆ ವಾಹನ ಸಂಚಾರ ನಿರ್ಬಂಧ

ತೀವ್ರ ಚಳಿ ಎಂದು ಕ್ಯಾಬ್ ನಲ್ಲೇ ಮಲಗಿದ ಚಾಲಕ, ಅಲ್ಲೇ ಸಾವು.. ಕಾರಣ ಏನು ಗೊತ್ತಾ?

SCROLL FOR NEXT