ಬೆಂಗಳೂರು: ಹೊಸ ವರ್ಷ 2026 ಸಂಭ್ರಮಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸರ್ವಸಿದ್ಧತೆಗಳನ್ನು ಮಾಡಿದ್ದು, ಈ ನಡುವೆ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆಯೊಂದು ತೀವ್ರ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ದಿನ ಮದ್ಯಸೇವನೆ ಮಾಡಿದರವರನ್ನು ಡ್ರಾಪ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪರಮೇಶ್ವರ್ ಅವರು ಹೇಳಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪರಮೇಶ್ವರ್ ಅವರು, ಮದ್ಯ ಸೇವನೆ ಮಾಡಿರುವ ಎಲ್ಲರನ್ನೂ ಮನೆಗೆ ಬಿಡುವ ವ್ಯವಸ್ಥೆ ಇರುವುದಿಲ್ಲ. ಯಾರು ತೀರ ಮದ್ಯ ಸೇವನೆ ಮಾಡಿ ನಡೆಯುವುದಕ್ಕೇ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಇರುತ್ತಾರೆ ಹಾಗೂ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಇರುತ್ತಾರೋ ಅವರನ್ನು ಡ್ರಾಪ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಮದ್ಯಸೇವನೆ ಮಾಡಿದವರನ್ನು ಅವರ ಮನೆಗೆ ಕರೆದುಕೊಂಡು ಹೋಗುವುದಿಲ್ಲ. ವಿಶ್ರಾಂತಿ ಸ್ಥಳಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿಗೆ ಕರೆದುಕೊಂಡು ಹೋಗಲಾಗುವುದು. ಇದಕ್ಕಾಗಿ ನಗರದಲ್ಲಿ 15 ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ತೀರಾ ಪ್ರಜ್ಞೆಯೇ ಇಲ್ಲದೆ ಇರುವವರನ್ನು ಆ ಜಾಗದಲ್ಲಿ ಕೂರಿಸಲು (ವಿಶ್ರಾಂತಿ ನೀಡಲಾಗುತ್ತದೆ) ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಜ್ಞೆ ಬಂದ ನಂತರ ಅವರ ವಿಳಾಸವನ್ನು ಪಡೆದುಕೊಂಡು ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯವಾಗಿ ಹೆಣ್ಣು ಮಕ್ಕಳು ಆ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಇರುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಜ್ಞೆ ಇರುವುದಿಲ್ಲ, ಯಾರು ಏನು ಬೇಕಾದರೂ ಮಾಡುವ ಸಾಧ್ಯತೆ ಇರುತ್ತದೆ. ಆ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆಯ ಇದರ ಹೊರತಾಗಿ ಬೇರೆ ಉದ್ದೇಶವೇನು ಇಲ್ಲ ಎಂದು ಸ್ಪಷ್ಟಪಡಿಸಿದರು.
ಭದ್ರತೆ ಕುರಿತು ಮಾತನಾಡಿ, ನಗರಗಳಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಂಗಳೂರಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನಿಂದ ಜನ ಬರುತ್ತಾರೆ. ನಮ್ಮವರೂ ಸಹ ಸೇರುತ್ತಾರಾದರೂ ಅವರ ಸಂಖ್ಯೆ ವಿರಳವಾಗಿರುತ್ತದೆ. ವಿವಿಧ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇವರಲ್ಲಿ ಹೆಚ್ಚು ಜನ ಮದ್ಯ ಸೇವನೆ ಮಾಡಿರುತ್ತಾರೆ. ತಳ್ಳಾಟ - ನೂಕುನುಗ್ಗಲು ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೆಚ್ಚು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.