ಸುದ್ದಿ ಮುಖ್ಯಾಂಶಗಳು online desk
ರಾಜ್ಯ

News headlines 04-02-2025| ಗೋ ಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್- ಕಾಂಗ್ರೆಸ್ ಸಚಿವ, ರೌಡಿ ಶೀಟರ್ ಕಾಲಿಗೆ ಗುಂಡೇಟು; ಬಂಧನ, ಬೆಂಗಳೂರು ರೈಲ್ವೆ ವಿಭಾಗಕ್ಕೆ ಕವಚ್! ರಾಜ್ಯಪಾಲರ ಕಚೇರಿಗೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು

ರಾಜ್ಯಪಾಲರ ಕಚೇರಿಗೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು

ಬಲವಂತವಾಗಿ ಸಾಲ ವಸೂಲಾತಿ ಮಾಡುವ ಮೂಲಕ ಸಾಲಗಾರರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಲು ರಾಜ್ಯಸರ್ಕಾರ ಮೈಕ್ರೋ ಫೈನಾನ್ಸ್ (ದಬ್ಬಾಳಿಕೆ ತಡೆ) ಸುಗ್ರೀವಾಜ್ಞೆ 2025ರ ಪರಿಷ್ಕೃತ ಕರಡನ್ನು ಸಿದ್ದಪಡಿಸಿದ್ದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ವಸೂಲಾತಿಗಾಗಿ ಕಿರುಕುಳ ನೀಡಿದವರಿಗೆ ಈ ಮೊದಲು 3 ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು. ಈಗ ಈ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಹೆಚ್ಚಳ ಮಾಡಿದ್ದೇವೆ. ಈ ಸಂಬಂಧ ವಿಧಿಸಲಾಗುತ್ತಿರುವ ದಂಡವನ್ನು 5 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ. ಸಾಲ ವಸೂಲಾತಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಕಾನೂನು ಬಿಸಿ ತಟ್ಟಬೇಕೆಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಗೋ ಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್- ಕಾಂಗ್ರೆಸ್ ಸಚಿವ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗೋವು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೊನ್ನಾವರದಲ್ಲಿ ಗರ್ಭಿಣಿ ಹಸುವನ್ನು ಕೊಂದ ಘಟನೆ ಹಿನ್ನೆಲೆಯಲ್ಲಿ ಗೋಕಳ್ಳತನ ಮಾಡುವವರ ಮೇಲೆ ಶೂಟೌಟ್ ಮಾಡಲಾಗುವುದು ಎಂದು ಜಿಲ್ಲಾ ಸಚಿವ ಮಂಕಾಳ್ ಎಸ್ ವೈದ್ಯ ಎಚ್ಚರಿಕೆ ನೀಡಿದರು. ಗೋ ಕಳ್ಳತನವನ್ನು ತಡೆಯಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು. ಗೋಕಳ್ಳರ ಮೇಲೆ ಸಚಿವರ ಶೂಟೌಟ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಂಕಾಳ್ ವೈದ್ಯ ಅವರದ್ದು RSS ಮನಸ್ಥಿತಿ ಎಂದು ಆರೋಪಿಸಲಾಗುತ್ತಿದೆ. ಸಚಿವರ ಹೇಳಿಕೆ ಈಗ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು ಸಮರ್ಥಿಸಿಕೊಳ್ಳದಂತ ಪರಿಸ್ಥಿತಿ ಎದುರಾಗಿದೆ. ಮಂಕಾಳು ವೈದ್ಯ ಅವರದ್ದು ವೈಯಕ್ತಿಕ ಹೇಳಿಕೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿ ಗೃಹ ಸಚಿವ ಪರಮೆಶ್ವರ್ ನುಣುಚಿಕೊಂಡಿದ್ದಾರೆ.

ದರೋಡೆಕೋರರ ಕಾಲಿಗೆ ಗುಂಡು

ಹುಬ್ಬಳ್ಳಿ-ಧಾರವಾಡದಲ್ಲಿ ದರೋಡೆ ಮಾಡಿ ಪೊಲೀಸರಿಗೆ ಸಿಗದೇ ಪರಾರಿಯಾಗುತ್ತಿದ್ದ ದರೋಡೆಕೋರರ ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿದ್ದಾರೆ. ದರೋಡೆ ಮತ್ತು ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದ ಇಬ್ಬರು ಆರೋಪಿಗಳಾದ ಗುಜರಾತ್ ಮೂಲದ ದಿಲೀಪ್ ಮತ್ತು ನಿಲೇಶ್ ಕಾಲಿಗೆ ಗುಂಡಿಕ್ಕಿ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತರ ಮೂವರು ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೂ ಶೋಧ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿ ಬೈಕ್ ಸವಾರರನ್ನು ಸುಲಿಗೆ ಮಾಡಿ ನಂತರ ಮನೆಯೊಂದರಿಂದ ದರೋಡೆಗೆ ಆರೋಪಿಗಳು ಯತ್ನಿಸಿದ್ದು ಈ ವೇಳೆ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದಾಗ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಸದ್ಯ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು ರೈಲ್ವೆ ವಿಭಾಗಕ್ಕೆ ಕವಚ್

ಭಾರತೀಯ ರೈಲ್ವೆ ಅಳವಡಿಸಿಕೊಂಡಿರುವ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾದ ಕವಚ್ ಅನ್ನು ಬೆಂಗಳೂರು ರೈಲ್ವೆ ಜಾಲದಾದ್ಯಂತ ಅಳವಡಿಸಲಾಗುವುದು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಲಕ್ನೋ ಮೂಲದ ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿದ ಕವಚ್ ನಿಂದಾಗಿ ರೈಲು ಅಪಘಾತಗಳು ಮುಖಾಮುಖಿ ಘರ್ಷಣೆಗಳನ್ನು ತಪ್ಪಿಸಬಹುದಾಗಿದೆ. ಹೀಗಾಗಿ ಬೆಂಗಳೂರು ವಿಭಾಗದ 1,144 ಕಿ.ಮೀ. ವ್ಯಾಪ್ತಿಯಲ್ಲಿ ಕವಚ್ ನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುತ್ತದೆ. ಮೊದಲ ಹಂತದಲ್ಲಿ ಒಟ್ಟು 684 ಕಿ.ಮೀ. ಮಾರ್ಗದಲ್ಲಿ ಅಳವಡಿಸಲಾಗುತ್ತಿದ್ದು ಇದಕ್ಕಾಗಿ 329 ಕೋಟಿ ವೆಚ್ಚವಾಗಲಿದೆ. ಎರಡನೇ ಹಂತದಲ್ಲಿ 460 ಕಿ.ಮೀ. ಮಾರ್ಗದಲ್ಲಿ 239 ಕೋಟಿ ವೆಚ್ಚದಲ್ಲಿ ಕವಚ್ ಅನ್ನು ಅವಳಡಿಸಲಾಗುತ್ತದೆ ಎಂದರು.

ಕುಖ್ಯಾತ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಬಂಧನ

ಕೊಲೆ, ಸುಲಿಗೆ, ಬೆದರಿಕೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನ ಕಾಲಿಗೆ ಇಂದು ಬೆಳಗ್ಗೆ ಸರ್ಜಾಪುರ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ. ಗುಬ್ಬಚ್ಚಿ ಸೀನನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜನವರಿ 28ರಂದು ದೊಮ್ಮಸಂದ್ರ ಸಂತೆ ಮೈದಾನದಲ್ಲಿ ನಡೆದಿದ್ದ ಮಾಜಿ ರೌಡಿ ಶೀಟರ್ ಮುಸರಿ ವೆಂಕಟೇಶನ ಕೊಲೆ ಪ್ರಕರಣದಲ್ಲಿ ಗುಬ್ಬಚ್ಚಿ ಸೀನ ಹಾಗೂ ಆತನ ಸಹಚರರು ಭಾಗಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸೀನನನ್ನು ಬಂಧಿಸಲು ತೆರಳಿದ್ದ ಇನ್ ಸ್ಪೆಕ್ಟರ್ ನವೀನ್ ಕುಮಾರ್, ಪೇದೆ ಇರ್ಫಾನ್ ಕಲಾರಿ ಮೇಲೆ ಹಲ್ಲೆಗೈಯಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT