ಡಿ.ಕೆ ಶಿವಕುಮಾರ್ 
ರಾಜ್ಯ

ಮೆಟ್ರೋ ಪ್ರಯಾಣ ದರ ಹೆಚ್ಚಳ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ: ಡಿ.ಕೆ ಶಿವಕುಮಾರ್

ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಈಗಾಗಲೇ ನಿಗಮವು ಒಂದು ತೀರ್ಮಾನ ತೆಗೆದುಕೊಂಡಿದೆ. ನಾನು ಆ ವರದಿಯಲ್ಲಿ ಏನಿದೆ ಎಂದು ಮೂಗು ತೂರಿಸಲು ಹೋಗುವುದಿಲ್ಲ ಎಂದು ಹೇಳಿದರು.

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿ. (ಬಿಎಂಆರ್‌ಸಿಎಲ್‌) ತೀರ್ಮಾನ ಮಾಡುತ್ತದೆ. ಅದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದ್ದು, ರಾಜ್ಯ ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಈಗಾಗಲೇ ನಿಗಮವು ಒಂದು ತೀರ್ಮಾನ ತೆಗೆದುಕೊಂಡಿದೆ. ನಾನು ಆ ವರದಿಯಲ್ಲಿ ಏನಿದೆ ಎಂದು ಮೂಗು ತೂರಿಸಲು ಹೋಗುವುದಿಲ್ಲ," ಎಂದು ಹೇಳಿದರು.

ಕುಡಿಯುವ ನೀರಿನ ದರ ಏರಿಕೆ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಮುಂದಿಡಲಾಗುವುದು. ನೀರಿನ ದರ ಏರಿಕೆಯಾಗಿ 14 ವರ್ಷಗಳಾಗುತ್ತಾ ಬಂದಿದೆ. ಮಂಡಳಿಗೆ ವಾರ್ಷಿಕ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ. ಜಲಮಂಡಳಿ ಈಗಾಗಲೇ ವರದಿ ನೀಡಿದ್ದು, ಅದನ್ನು ಸಚಿವ ಸಂಪುಟದ ಮುಂದಿಡಲಾಗುವುದು," ಎಂದು ತಿಳಿಸಿದರು.

ಕಳೆದ ಬಾರಿ ವಿದ್ಯುತ್‌ ದರ ಕಡಿಮೆ ಮಾಡಿದ್ದೇವೆ. ಆದರೆ, ಒಮ್ಮೆಯೂ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುವುದಿಲ್ಲ. ಕೇವಲ ದರ ಏರಿಕೆ ಬಗ್ಗೆ ಮಾತ್ರ ಸುದ್ದಿ ಮಾಡುತ್ತವೆ,'' ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ನಿವಾರಿಸುವ ಉದ್ದೇಶದಿಂದ ನೂತನ ನಮ್ಮ ಮೆಟ್ರೋ ಮಾರ್ಗಗಳಲ್ಲಿ ಡಬಲ್‌ ಡೆಕ್ಕರ್‌ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದೆ. ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳು, ಪ್ರಾಧಿಕಾರದ ಅಧಿಕಾರಿಗಳ ಜತೆ ಗುರುವಾರ ನಗರ ಪ್ರದಕ್ಷಿಣೆ ನಡೆಸಿದ ನಂತರ ಬಿಎಂಆರ್‌ಸಿಎಲ್‌ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್‌ ಈ ವಿಷಯ ತಿಳಿಸಿದರು.

ಮೂರನೇ ಹಂತದ ಮೆಟ್ರೋ ಮಾರ್ಗ ಅನುಷ್ಠಾನದ ವೇಳೆ ಡಬಲ್‌ ಡೆಕ್ಕರ್‌ ವ್ಯವಸ್ಥೆ ಇರಲೇಬೇಕು ಎನ್ನುವ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಾಗಿದೆ. ದಿನಕಳೆದಂತೆ ರಸ್ತೆಗಳನ್ನು ಅಗಲ ಮಾಡಲು ಕಷ್ಟವಾಗುತ್ತದೆ. ಅಲ್ಲದೆ, ಭೂ ಸ್ವಾಧೀನಕ್ಕೆ ಪರಿಹಾರ ಮೊತ್ತ ಕೂಡ ಹೆಚ್ಚಳವಾದ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಏರ್‌ಪೋರ್ಟ್‌ ರಸ್ತೆಯ ಮೆಟ್ರೋ ಮಾರ್ಗವನ್ನು ಡಬಲ್‌ ಡೆಕ್ಕರ್‌ ಮಾಡುವ ಉದ್ದೇಶವಿತ್ತು. ಆದರೆ, ಈಗಾಗಲೇ ಪಿಲ್ಲರ್‌ಗಳನ್ನು ನಿರ್ಮಿಸಿರುವ ಹಿನ್ನೆಲೆಯಲ್ಲಿ ಯೋಜನೆಯಿಂದ ಹಿಂದೆ ಸರಿಯಲಾಗಿದೆ," ಎಂದು ಹೇಳಿದರು.

ಹೆಬ್ಬಾಳ, ಗೊರಗುಂಟೆಪಾಳ್ಯ, ಬಿಇಎಲ್ ಕಡೆಯ ರಸ್ತೆ, ಲೊಟ್ಟೆಗೊಲ್ಲಹಳ್ಳಿ, ಸುಮ್ಮನಹಳ್ಳಿ ಭಾಗದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಎಂಆರ್‍ಸಿಎಲ್, ಬಿಡಿಎ ಆಯುಕ್ತರು ಒಟ್ಟಿಗೆ ನಗರ ಪ್ರದಕ್ಷಿಣೆ ಹಾಕಿ ಸಂಚಾರ ದಟ್ಟನೆ ಹೆಚ್ಚಿರುವ ಕಡೆ ಅನುಕೂಲವಾಗುವಂತೆ ಎಲ್ಲೆಲ್ಲಿ ಮೇಲ್ಸೇತುವೆ, ಅಂಡರ್ ಪಾಸ್ ಗಳು, ಸುರಂಗ ರಸ್ತೆಗಳು ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.

ಭವಿಷ್ಯದಲ್ಲಿ ಮೆಟ್ರೋ ನಿಲ್ದಾಣಗಳು ಇರುವ ಕಡೆ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರು ಅನೇಕ ಕಡೆ ರಸ್ತೆ ಬದಿ, ಖಾಸಗಿ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ. ಮೂರನೇ ಹಂತದ ಮೆಟ್ರೋ ಮಾರ್ಗ ಅನುಷ್ಠಾನದ ವೇಳೆ ಡಬಲ್ ಡೆಕ್ಕರ್ ವ್ಯವಸ್ಥೆ ಇರಲೇಬೇಕು ಎನ್ನುವ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ತುಮಕೂರಿನಿಂದ ಕೆ.ಆರ್.ಪುರಂಗೆ ಹೋಗುವ ರಸ್ತೆ ಬಳಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಅಂಡರ್ ಪಾಸ್ ನಿರ್ಮಾಣಕ್ಕೆ ಬಿಡಿಎ, ಮೆಟ್ರೋ, ಬಿಬಿಎಂಪಿ ಸೇರಿ ಅಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಈ ಕಾಮಗಾರಿಯನ್ನು ಬಿಡಿಎ ನಿರ್ವಹಿಸಲಿದೆ. ರಾಜ್ಯ ಬಜೆಟ್ ಇರುವ ಕಾರಣಕ್ಕೆ ಬೆಂಗಳೂರು ಅಭಿವೃದ್ದಿ ಹಾಗೂ ನೀರಾವರಿ ಇಲಾಖೆಗೆ ಬೇಕಾದ ಅನುದಾನಗಳ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ಮಾಡಿ ಶುಕ್ರವಾರ ಮುಖ್ಯಮಂತ್ರಿಗೆ ವರದಿ ನೀಡಲಾಗುವುದು ಎಂದು ಶಿವಕುಮಾರ್ ಹೇಳಿದರು.

ಡಬಲ್ ಡೆಕ್ಕರ್ ಮಾಡಲು ಹೆಚ್ಚುವರಿ 9,800 ಕೋಟಿ ರೂ. ವೆಚ್ಚವಾಗುತ್ತದೆ. ಈಗ ಪಶ್ಚಿಮ ಭಾಗದಲ್ಲಿ ಮಾತ್ರ ಮಾಡಲಾಗುತ್ತಿದೆ. ಈಗಾಗಲೇ ರಾಗಿಗುಡ್ಡ ಭಾಗದಲ್ಲಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದೇವೆ. ಇನ್ನೂ ಒಂದಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕಿದೆ. ಎಲ್ಲವನ್ನು ಬಗೆಹರಿಸಿ ಮುಂದುವರೆಯಲಾಗುವುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT