ಬೆಂಗಳೂರು: ಲೂಟಿ ಮಾಡಿದ ಹಣಕ್ಕಾಗಿ ಟೀ ಅಂಗಡಿ ಬಳಿ ಜಗಳವಾಡಿದ 6 ಮಂದಿ ಆರೋಪಿಗಳು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳನ್ನು ಎಸ್ ಸಮೀರ್ (26), ಕೆ ಮನೋಹರ (29), ಎಸ್ ಗಿರೀಶ್ (26), ಜಗ್ಗೇಶ್ (28), ಲಗ್ಗೆರೆಯ ವಿಆರ್ ಜಶ್ವಂತ್ (27) ಎಂದು ಗುರ್ತಿಸಲಾಗಿದೆ. ಆರು ಮಂದಿಯೂ ಖಾಸಗಿ ನಗದು ನಿರ್ವಹಣಾ ಕಂಪನಿಯ ಉದ್ಯೋಗಿಗಳಾಗಿದ್ದು, ನಂದಿ ಲೇಔಟ್ ನಿವಾಸಿಗಳಾಗಿದ್ದರು.
ಕೆಂಪೇಗೌಡ ಲೇಔಟ್‌ನಲ್ಲಿರುವ ಟೀ ಸ್ಟಾಲ್‌ಗೆ ಬಂದಿದ್ದ ಆರೋಪಿಗಳು, ಕದ್ದ ಹಣವನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಜಗಳವಾಡುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಲವು ಎಟಿಎಂ ಗಳಲ್ಲಿ ಹಣ ದೋಚಿರುವ ವಿಚಾರ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಆರೋಪಿಗಳು ಎಟಿಎಂಗಳಿಗೆ ಹಣವನ್ನು ತುಂಬುವ ಹಾಗೂ ಎಟಿಎಂಗಳನ್ನು ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಅಲ್ಲದೆ, ಎಟಿಎಂಗಳಿಗೆ ಹಣವನ್ನು ತುಂಬುವಾಗ ಕಡಿಮೆ ಹಣವನ್ನು ತುಂಬಿ ಉಳಿದ ಹಣವನ್ನು ಲಪಟಾಯಿಸುತ್ತಿದ್ದರಲ್ಲದೆ, ಎಟಿಎಂ ಯಂತ್ರಗಳನ್ನು ರಿಪೇರಿ ಮಾಡುವಾಗ ಪಾಸ್ವರ್ಡ್ ಪಡೆದು ಎಟಿಎಂಗಳಲಿದ್ದ ಹಣವನ್ನು ಕಳವು ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಮೂವರು ಆರೋಪಿಗಳು ಕದ್ದ ಹಣವನ್ನು ಬಳಸಿಕೊಂಡು ಮೂರು ಎಸ್‌ಯುವಿಗಳನ್ನು ಖರೀದಿಸಿದ್ದರು ಮತ್ತು ಕಳೆದ ಎರಡು ವರ್ಷಗಳಿಂದ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 51 ಲಕ್ಷ ರೂ. ನಗದು ಮತ್ತು 90 ಲಕ್ಷ ರೂ. ಮೌಲ್ಯದ ಮೂರು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.