ಬೆಂಗಳೂರು: ಪೊಲೀಸ್ ಸೋಗಿನಲ್ಲಿ ಬಂದಿರುವ ದುಷ್ಕರಮಿಗಳು BWSSB ಗುತ್ತಿಗೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿರುವ ಜಯಪುರ ಗೇಟ್ ಬಳಿ ಗುರುವಾರ ನಡೆದಿದೆ.
ಹೆಚ್.ಸಿ. ನಾಗೇಶ್ ಹಲ್ಲೆ ಹಾಗೂ ದರೋಡೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಾರಿನಲ್ಲಿ ಚನ್ನಪಟ್ಟಣದ ಮಾಲೂರಿಗೆ ತೆರಳುತ್ತಿದ್ದಾಗ ಪೊಲೀಸರ ವೇಷದಲ್ಲಿ ಬೈಕ್ ನಲ್ಲಿ ಬಂದಿರುವ ದುಷ್ಕರ್ಮಿಗಳು, ದಾಖಲೆ ಪರಿಶೀಲಿಸುವ ನೆಪದಲ್ಲಿ ಕಾರು ನಿಲ್ಲಿಸಿದ್ದಾರೆ. ದಾಖಲೆ ತೋರಿಸಲು ಬಾಗಿಲು ತೆಗೆದಾಗ ಹಲ್ಲೆ ನಡೆಸಿದ್ದಾರೆ. ನಂತರ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹಲ್ಲೆಯಿಂದಾಗಿ ನಾಗೇಶ್ ಅವರ ಕಾಲಿನ ಮೂಳೆ ಮುರಿತವಾಗಿದ್ದು, ಮದ್ದೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪ ಪೊಲೀಸ ಸಮವಸ್ತ್ರ ಧರಿಸಿದ್ದ. ಬೂಟು ಕಾಲುಗಳಿಂದ ಒದ್ದ. ಕಾರಿನಲ್ಲಿ ಸ್ವಲ್ಪ ದೂರ ಕರೆದುಕೊಂಡು ಹಲ್ಲೆ ನಡೆಸಿದ. ಬಳಿಕ ಚಾಕುವಿನಿಂದ ಬೆದರಿಸಿ, ಹಣ ಹಾಗೂ ಚಿನ್ನಾಭರಣವನ್ನು ಕಸಿದು, ಬೈಕ್ ನಲ್ಲಿ ಪರಾರಿಯಾದ ಎಂದು ಪೊಲೀಸರಿಗೆ ನೀಡಿದ ನಾಗೇಶ್ ದೂರಿನಲ್ಲಿ ತಿಳಿಸಿದ್ದಾರೆ.