ಬೆಂಗಳೂರು: ಪೊಲೀಸರ ಸೋಗಿನಲ್ಲಿ ಚುನಾವಣಾಧಿಕಾರಿಗಳ ಸುಲಿಗೆಗೆ ಯತ್ನ; ಯುವಕನ ಬಂಧನ, ಇನ್ನಿಬ್ಬರು ಪರಾರಿ
ಮೈಸೂರು: ಪೊಲೀಸ್ ಎಂದು ಬಿಂಬಿಸಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಯತ್ನಿಸಿದ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.
ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್‌ನ ಭಾಗವಾಗಿದ್ದ ಅಧಿಕಾರಿಗಳು ಏಪ್ರಿಲ್ 4ರಂದು ರಾತ್ರಿ ಸಾತಗಳ್ಳಿ ಬಸ್ ಡಿಪೋದಿಂದ ದೇವೇಗೌಡ ವೃತ್ತದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಕರಿಯಪ್ಪ, ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಮಹದೇವ್, ಕಾರು ಚಾಲಕ ಲಿಕಿತ್, ಮೇಟಗಳ್ಳಿ ಠಾಣೆ ಕಾನ್‌ಸ್ಟೆಬಲ್ ಶಶಿಕುಮಾರ್ ಕಾರಿನಲ್ಲಿದ್ದರು.
ಈ ವೇಳೆ ದೇವೇಗೌಡ ವೃತ್ತದ ಬಳಿ ಮೋಟಾರ್ ಬೈಕ್‌ನಲ್ಲಿ ಬಂದ ಮೂವರು ಯುವಕರು ಕಾರನ್ನು ಅಡ್ಡಗಟ್ಟಿದ್ದಾರೆ. ವಾಹನದಲ್ಲಿದ್ದವರು ಚುನಾವಣಾಧಿಕಾರಿಗಳು ಎಂಬ ಅರಿವಿಲ್ಲದೆ ಯುವಕರು ತಾವು ವಾಹನ ತಪಾಸಣೆಗೆ ನಿಯೋಜನೆಗೊಂಡ ಪೊಲೀಸರು ಎಂದು ಹೇಳಿಕೊಂಡಿದ್ದಾರೆ.
ಇನ್ನಿಬ್ಬರು ಪರಾರಿ
ಯುವಕರು ತಾವು ವಾಹನದಲ್ಲಿ ಸಾಗಿಸುತ್ತಿದ್ದ ಹಣವನ್ನು ಕೊಡುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ. ಯುವಕರು ಅಧಿಕಾರಿಗಳಿಗೆ ಹಣದ ಬೇಡಿಕೆ ಇಡುತ್ತಿದ್ದಂತೆಯೇ ಪೊಲೀಸ್ ಪೇದೆ ಶಶಿಕುಮಾರ್ ಕಾರಿನಿಂದ ಕೆಳಗಿಳಿದು ಅವರನ್ನು ಪ್ರಶ್ನಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದನ್ನು ಅರಿತ ಯುವಕರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಆದರೆ, ಅವರಲ್ಲಿ ಯರಗನಹಳ್ಳಿ ನಿವಾಸಿ ಮಾದೇಗೌಡ ಅಲಿಯಾಸ್ ಮಧು ಎಂಬಾತನನ್ನು ಶಶಿಕುಮಾರ್ ಹಿಡಿದಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಬಂಧಿತ ಯುವಕನನ್ನು ಆಲನಹಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.