ಬೆಂಗಳೂರು: ಬೆಂಗಳೂರಿನ ಜೀವಂತ ಕೆರೆಗಳಲ್ಲಿ ಹಲಸೂರು ಕೆರೆಯೂ ಒಂದು. ಒಂದು ಕಾಲದಲ್ಲಿ ಈ ಕೆರೆ ಹಲಸೂರು, ಶಿವಾಜಿನಗರ, ಇಂದಿರಾನಗರ ಸೇರಿದಂತೆ ಕಂಟೋನ್ಮೆಂಟ್ ಭಾಗದ ಜನರ ಕುಡಿಯುವ ನೀರಿನ ಸೆಲೆಯಾಗಿತ್ತು. ಈ ಕೆರೆಗೆ ಹೊಸ ನೀಡಲು ಸರ್ಕಾರ ಮುಂದಾಗಿದೆ.
ಕೆರೆಯ ಪೂರ್ವ ಭಾಗದಲ್ಲ ನಡಿಗೆ ಮಾರ್ಗದಲ್ಲಿ ಸಮಸ್ಯೆ ಹಾಗೂ ಸೌಲಭ್ಯಗಳ ಕೊರತೆ ಎದುರಾಗಿದ್ದು, ಇದರ ವಿರುದ್ಧ ಲೇಕ್ ವಾಕರ್ಸ್ ಫ್ರಾಟರ್ನಿಟಿಯ ಹಿರಿಯ ನಾಗರಿಕರ ಗುಂಪೊಂದು ಧ್ವನಿ ಎತ್ತಿದೆ. ಇದಕ್ಕೆ ಸರ್ಕಾರ ಸ್ಪಂದನೆ ನೀಡಿದೆ.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಬಿಬಿಎಂಪಿ ಕೆರೆಗಳ ಪೂರ್ವ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ ನಿತ್ಯ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯೂಎಸ್ಎಸ್ಬಿ) ಅಧಿಕಾರಿಗಳು ಮತ್ತು ಇತರರು ಶನಿವಾರ ಕೆರೆ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರಿಯ ನಾಗರಿಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಆಲಿಸಿದ್ದಾರೆ.
ನಡಿಗೆ ಮಾರ್ಗ ಜಲ್ಲಿಕಲ್ಲುಗಳಿಂದ ಕೂಡಿದ್ದು, ಹಿರಿಯ ನಾಗರಿಕರು ನಡೆಯಲು ಅನಾನುಕೂಲತೆಯನ್ನುಂಟುಮಾಡುತ್ತಿದೆ, ಇದರಿಂದ ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ನಿವೃತ್ತ ಉದ್ಯಮಿ 65 ವರ್ಷದ ಪೃಥ್ವಿ ಪಾಣಿ ಎಂಬುವವರು ಹೇಳಿದ್ದಾರೆ.
ಪ್ರಮುಖವಾಗಿ ಮಳೆಗಾದಲ್ಲಿ ಸಮಸ್ಯೆ ಹೆಚ್ಚಾಗಿರುತ್ತದೆ. ಕೆರೆ ಪ್ರದೇಶದ ಕೆಸರುಮಯವಾಗಿರಲಿದ್ದು, ಜಾರುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದ. ಇದಲ್ಲದೆ, ಬೇಲಿಗಳು ಮುರಿದುಹೋಗಿವೆ. ಕೆರೆ ಬಳಿ ಶೌಚಾಲಯ ಹಾಗೂ ಮಕ್ಕಳ ಆಟಕ್ಕೆ ಜಾಗವೂ ಇಲ್ಲ. ಬೆಂಚುಗಳು ಹಾಳಾಗಿವೆ. ಕುಳಿತು, ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲದಾಗಿದೆ. ಈ ಸಮಸ್ಯೆಗಳು ಕೆರೆ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ಕೆರೆ ಪುನರಾಭಿವೃದ್ಧಿಗಾಗಿ ಒಂದು ಮಾಸ್ಟರ್ ಪ್ಲಾನ್ ಅನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಈ ಯೋಜನೆಯಲ್ಲಿ ಮಲ್ಟಿಲೆವೆಲ್ ವಾಕ್ ವೇ, ನವೀಕರಣ ಕಾರ್ಯ, ಅಲಂಕಾರಿಕ ದೀಪಘಳು, ಕಾರಂಜಿ ಸ್ಥಾಪನೆ, ಯೋಗ ಮಾಡಲು ವೇದಿಕೆಯನ್ನು ಸೇರಿಸಲಾಗಿದೆ. ಈ ಹಿಂದೆ ಉಲ್ಸೂರು ಲೇಕ್ ವಾಕರ್ ಫ್ರೆಟರ್ನಿಟಿಯ ಸದಸ್ಯರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಸೀರ್ ಅಹ್ಮದ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅಹ್ಮದ್ ಅವರು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದರು. ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನೂ ಸರ್ಕಾರ ಮಂಜೂರು ಮಾಡಿತ್ತು. ಮೊದಲ ಹಂತದಲ್ಲಿ, ಕೆರೆಯ ಅರ್ಧದಷ್ಟು ಭಾಗವನ್ನು ನಿರ್ಮಾಣ ಕಾರ್ಯಕ್ಕಾಗಿ ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ.
ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಪಾದಚಾರಿಗಳು, ಜಾಗಿಂಗ್ ಮಾಡವವರು ಹಾಗೂ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲಾಗಿದೆ. ಸಮಸ್ಯೆಗಳ ಬಗ್ಗೆ ಎಂಜಿನಿಯರಿಂಗ್ ತಂಡದೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಕೆರೆ ಪುನರಾಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.