ಬೆಂಗಳೂರು: ಅನುಮತಿ ಇಲ್ಲದೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಇಂಗ್ಲೆಂಡ್ ಗಾಯಕ ಎಡ್ ಶೀರನ್ ಅವರನ್ನು ಬೆಂಗಳೂರು ಪೊಲೀಸರು ತಡೆದಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಎಡ್ ಶೀರನ್ ಗ್ಲೋಬಲ್ ಪಾಪ್ ಸ್ಟಾರ್ ಆಗಿದ್ದು, ಇವರ ಮ್ಯೂಜಿಕ್ ಕನ್ಸರ್ಟ್ ಎಂದರೆ ಜನರು ಎಗ್ಗಿಲ್ಲದೆ ಸೇರುತ್ತಾರೆ. ಇದರಂತೆ ಬೆಂಗಳೂರಿನಲ್ಲಿ ಎಡ್ ಶೀರನ್ ಅವರ ತಂಡ ಅನೀರಿಕ್ಷಿತ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಎಡ್ ಶೀರನ್ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಶೇಪ್ ಆಫ್ ಯು ಹಾಡಲು ಮುಂದಾಗಿದ್ದು, ಈ ವೇಳೆ ಸ್ಥಳಕ್ಕೆ ಬಂದಿರುವ ಪೊಲೀಸರು, ಕೇಬಲ್‌ಗಳನ್ನು ಕಿತ್ತು ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.
ಸ್ಥಳದಲ್ಲಿ ಸಾಕಷ್ಟು ಜನರು ಸೇರಿದ್ದರು. ಕಾರಣ ತಿಳಿದಿರಲಿಲ್ಲ. ಎಡ್ ಶೀರನ್ ಬಂದಿರುವುದನ್ನು ನಿರೀಕ್ಷಿಸಿರಲಿಲ್ಲ. ಬೀದಿ ಬದಿಯಲ್ಲಿ ನೇರವಾಗಿ ಸಂಗೀತ ಕಾರ್ಯಕ್ರಮ ನೋಡಿದ್ದು, ಮೊದಲ ಬಾರಿಯಾಗಿತ್ತು. ಎಡ್ ಶೀರನ್ ಹಾಡುವುದನ್ನು ನೋಡಲು ಸಾಕಷ್ಟು ಕಾತುರದಿಂದ ಎಂದು ಕೆಫೆಟೇರಿಯಾ ಉದ್ಯೋದಿ ದೇಹಾ ಎ ಎಂಬುವವರು ಹೇಳಿದ್ದಾರೆ.
ಈ ನಡುವೆ ಎಡ್ ಶೀರನ್ ಅವರ ಕಾರ್ಯಕ್ರಮಕ್ಕೆ ಪೊಲೀಸರು ತಡೆಯೊಡ್ಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವರು ಕಾರ್ಯವಿಧಾನಗಳನ್ನು ಅನುಸರಿಸಬೇಕಿತ್ತು ಎಂದು ಹೇಳಿದ್ದಾರೆ.
2016 ರಿಂದ ಶೀರನ್ ಅವರ ಅಭಿಮಾನಿಯಾಗಿರುವ ವಿದ್ಯಾರ್ಥಿ ಪ್ರಸಿತ್ ಆರ್‌ವಿ ಎಂಬುವವರು ಮಾತನಾಡಿ, ಪರಿಸ್ಥಿತಿಯನ್ನು ಹೆಚ್ಚು ಸೌಜನ್ಯದಿಂದ ನಿಭಾಯಿಸಬಹುದಿತ್ತು ಎಂದು ತಿಳಿಸಿದ್ದಾರೆ.
ಎಡ್ ಶೀರನ್ ಅಂತರರಾಷ್ಟ್ರೀಯ ಕಲಾವಿದ. ಇಲ್ಲಿ ಪ್ರದರ್ಶನ ನೀಡಲು ಅವರು ಬಂದಿದ್ದಾರೆ. ಈ ರೀತಿಯ ಅಧಿಕಾರಿಗಳು ಅಸಭ್ಯವಾಗಿ ವರ್ತಿಸಿರುವುದು, ಭಾರತೀಯರ ಖ್ಯಾತಿಯನ್ನು ಕುಗ್ಗಿಸುತ್ತದೆ. ಅನುಮತಿ ಪಡೆಯಬೇಕಿತ್ತು ಎಂಬುದನ್ನು ತಿಳಿಸಲು ಹಲವು ಮಾರ್ಗಗಳಿತ್ತು. ವ್ಯವಸ್ಥಾಪಕ ಅಥವಾ ಪಿಆರ್ ತಂಡದ ಬಳಿ ಹೋಗಬಹುದಿತ್ತು ಅಥವಾ ಹಾಡು ಹಾಡಿದ ಬಳಿಕ ಕಾರ್ಯಕ್ರಮ ನಿಲ್ಲಿಸುವಂತ ಎಡ್ ಶೀರನ್ ಅವರಿಗೆ ಸೂಚಿಸಬಹುದಿತ್ತು. ನನ್ನ ನೆಚ್ಚಿನ ಕಲಾವಿದನ ಕಾರ್ಯಕ್ರಮವನ್ನು ಈ ರೀತಿ ಮೊಟಕುಗೊಳಿಸುವುದನ್ನು ನೋಡಿದ್ದು ಬೇಸರ ತಂದಿದೆ ಎಂದು ಹೇಳಿದ್ದಾರೆ.
ಚರ್ಚ್ ಸ್ಟ್ರೀಟ್ ನಿವಾಸಿ ಕಲ್ಯಾಣ ಸಂಘದ ಅಧ್ಯಕ್ಷ ಸಂಜಯ್ ಕುಮಾರ್ ಪಾಲ್ ಅವರು ಮಾತನಾಡಿ, ಕಲಾವಿದ ಎಷ್ಟೇ ದೊಡ್ಡವರಾಗಿದ್ದರೂ ಬೀದಿ ಪ್ರದರ್ಶನಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. "ಕಾನೂನಿನ ಪ್ರಕಾರ, ಪಾದಚಾರಿ ಮಾರ್ಗವನ್ನು ನಿರ್ಬಂಧಿಸಲು ಯಾರಿಗೂ ಅವಕಾಶವಿಲ್ಲ. ಪ್ರದರ್ಶನಕ್ಕೆ ಸರಿಯಾದ ಸ್ಥಳವನ್ನು ಪಡೆಯಲು ಸಂಘಟಕರು ಪೊಲೀಸರಿಗೆ ತಿಳಿಸಬೇಕಾಗಿತ್ತು. ಪಾದಚಾರಿ ಮಾರ್ಗಗಳು ಪಾದಚಾರಿಗಳಿಗೆ ಇರುವುದರಿಂದ ಪೊಲೀಸರು ಸರಿಯಾದ ಕೆಲಸವನ್ನು ಮಾಡಿದ್ದಾರೆ. ಇದು ಕಾರ್ಯಕ್ರಮಗಳ ವೇದಿಕೆಯಲ್ಲ ಎಂದು ಹೇಳಿದ್ದಾರೆ.
ಚರ್ಚ್ ಸ್ಟ್ರೀಟ್ ನಲ್ಲಿರುವ ಅಂಗಡಿ ಮಾಲೀಕರೊಬ್ಬರು ಮಾತನಾಡಿ, ಜನಸಂದಣಿ ನಿಯಂತ್ರಣ ಮುಖ್ಯವಾಗಿತ್ತು. ಹೀಗಾಗಿ ಪೊಲೀಸರ ನಡೆ ಸರಿಯಾಗಿತ್ತು ಎಂದು ಹಳಿದ್ದಾರೆ.
ಅನುಮತಿ ಬಗ್ಗೆ ಮಾತನಾಡುತ್ತಿರುವಾಗಲೇ ಎಡ್ ಶೀರನ್ ಹಾಡನ್ನು ಹಾಡಲು ಶುರು ಮಾಡಿದ್ದರು. ಜನಸಂದಣಿ ನಿಯಂತ್ರಣ ತಪ್ಪಿದ್ದರೆ ಅಥವಾ ಸಂಚಾರ ಸಮಸ್ಯೆ ಹೆಚ್ಚಾಗಿದ್ದರೆ ಅದು ದೊಡ್ಡ ಸಮಸ್ಯೆಯಾಗುತ್ತಿತ್ತು. ಸಮಸ್ಯೆ ಬಗ್ಗೆ ನಾವು ಮೇಲಧಿಕಾರಿಗಳಿಗೆ ವರದಿ ಮಾಡಬೇಕಾಗುತ್ತದೆ ಪೊಲೀಸರು ತಿಳಿಸಿದ್ದಾರೆ,
ಕಲಾವಿದರು ಬೀದಿಬದಿಗಳಲ್ಲಿ ಪ್ರದರ್ಶನ ನೀಡುವುದು ವಿದೇಶಗಳಲ್ಲಿ ಸಾಮಾನ್ಯ. ಆದರೆ, ಭಾರತದಲ್ಲಿ ಇದು ಅಸಾಮಾನ್ಯ. ವಿದೇಶಗಳಲ್ಲಿ ಬೀದಿಯಲ್ಲಿ ಅತ್ಯುತ್ತಮ ಕಲಾವಿದರು ಸಿಗುತ್ತಾರೆ. ಬೀದಿ ಬದಿಯಲ್ಲಿ ಹಾಡುವುದನ್ನು ಇಲ್ಲಿ ಕೀಳಾಗಿ ನೋಡಲಾಗುತ್ತದೆ ಸಂಗೀತಗಾರ ಕಾರ್ಲ್‌ಟನ್ ಬ್ರಗಾಂಜಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, 112ಗೆ ಕರೆ ಬಂದಿತ್ತು. ಚರ್ಚ್ ಸ್ಟ್ರೀಟ್‌ನಲ್ಲಿ ಪ್ರದರ್ಶನ ನಡೆಯುತ್ತಿದ್ದು, ತೊಂದರೆ ಉಂಟುಮಾಡುತ್ತಿದ್ದಾರೆಂದು ದೂರು ನೀಡಿದರು.
ಸ್ಥಳಕ್ಕೆ ತೆರಳಿದಾಗ ಸ್ಥಳದಲ್ಲಿ ಭಾರೀ ಸಂಖ್ಯೆಯ ಜನರು ಸೇರಿರುವುದು ಕಂಡು ಬಂದಿತು. ಪರಿಸ್ಥಿತಿ ಕೈಮೀರುವುದಕ್ಕೂ ಮುನ್ನ ಪರಿಸ್ಥಿತಿ ನಿರ್ವಹಣೆಗಾಗಿ ಮಧ್ಯ ಪ್ರವೇಶಿಸಬೇಕಾಯಿತು ಎಂದು ಹೇಳಿದ್ದಾರೆ.
ಆರಂಭದಲ್ಲಿ ಪ್ರದರ್ಶನ ನಿಲ್ಲಿರುವಂತೆ ಗಾಯಕನಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ, ಅವರು ತಮ್ಮ ಗಾಯನವನ್ನು ಮುಂದುವರೆಸಿದ್ದರು. ಹೀಗಾಗಿ ತಡೆಯೊಡ್ಡಲು ಮೈಕ್ರೊಫೋನ್ ಮತ್ತು ಸಂಗೀತ ವಾದ್ಯಗಳನ್ನು ಆಫ್ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.
ಗಾಯಕನ ತಂಡದವರು ಅನುಮತಿಗಾಗಿ ಡಿಸಿಪಿ ಕೇಂದ್ರ ಕಚೇರಿಯನ್ನು ಸಂಪರ್ಕಿಸಿದ್ದರು. ಆದಾಗ್ಯೂ, ಚರ್ಚ್ ಸ್ಟ್ರೀಟ್ ಜನದಟ್ಟಣೆಯ ಸ್ಥಳವಾಗಿರುವುದರಿಂದ, ಅನುಮತಿ ನಿರಾಕರಿಸಲಾಗಿತ್ತು. ಜನರಿಗೆ ಅನಾನುಕೂಲವಾಗುವುದರಿಂದ ಪಾದಚಾರಿ ಮಾರ್ಗಗಳಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.