ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಅರ್ಜಿಯನ್ನು ರದ್ದುಗೊಳಿಸಿರುವ ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಿಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಸೋಮವಾರ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದರೆ, ಅವರ ಪತ್ನಿ ಬಿ.ಎಂ. ಪಾರ್ವತಿ ಎರಡನೇ ಹಾಗೂ ಅವರ ಭಾಮೈದುನ ಮಲ್ಲಿಕಾರ್ಜುನ ಸ್ವಾಮಿ ಮೂರನೇ ಆರೋಪಿಯಾಗಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ತೀಚಿಗೆ ರದ್ದುಗೊಳಿಸಿತ್ತು.
ಕರ್ನಾಟಕ ಲೋಕಾಯುಕ್ತ ಹಾಗೂ ಇಡಿ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಲೋಕಾಯುಕ್ತ ವಿಚಾರಣೆಯನ್ನು ಸಂಪೂರ್ಣಗೊಳಿಸಿದ್ದು, ನಾಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.
ಮುಡಾ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನನ್ನನ್ನು ಆಗಾಗ್ಗೆ ಪ್ರಶ್ನಿಸಲಾಗಿದೆ. ನನ್ನ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪನ್ನು ಕೂಲಂಕುಷವಾಗಿ ಓದಿದ ನಂತರ, ನನ್ನ ಬಳಿಯಿರುವ ಪುರಾವೆಗಳನ್ನು ಪುನಃ ಪರಿಶೀಲಿಸಿದೆ. ನನ್ನ ಕೆಲವು ನಿಕಟ ಕಾನೂನು ಸಲಹೆಗಾರರು ಮತ್ತು ಹಿತೈಷಿಗಳೊಂದಿಗೆ ವಿಷಯವನ್ನು ಚರ್ಚಿಸಿದ್ದು, ಹಿಂದಿನ ಕಾನೂನು ಅನುಭವಗಳನ್ನು ಪರಿಗಣಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಮತ್ತು ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಬದಲು ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಲೆಕ್ಕಿಸದೆ ನನ್ನ ಬಳಿ ಇರುವ ಮತ್ತು ಮುಂದೆ ಪಡೆಯುವ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣವನ್ನು ಮುಂದುವರಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ನನ್ನ ಆರೋಪಗಳನ್ನು ಸಾಬೀತುಪಡಿಸಿ, ನನ್ನ ಬಳಿಯಿರುವ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆ ಖಾತ್ರಿಪಡಿಸುವುದಾಗಿ ಬಲವಾಗಿ ನಂಬಿದ್ದೇನೆ. ಪರೋಕ್ಷ ಕಾನೂನು ಸಹಕಾರ ಮತ್ತು ಅಗತ್ಯವಿದ್ದರೆ ವಕೀಲರನ್ನು ನೇಮಿಸಿಕೊಳ್ಳುತ್ತೇನೆ. ಆರೋಪಿಗಳಿಗೆ ಆದಷ್ಟು ಬೇಗ ನ್ಯಾಯಾಲಯದಲ್ಲಿ ಆರೋಪಿಗಳಿಗ ಶಿಕ್ಷೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಸಾಕ್ಷ್ಯಧಾರ ಸಲ್ಲಿಸಿ, ವಾದ ಮಂಡಿಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.