ಚಿತ್ರದುರ್ಗ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅನುದಾನದ ಕೊರತೆಯಿಂದಾಗಿ 'ಅನ್ನ ಭಾಗ್ಯ' ಫಲಾನುಭವಿಗಳಿಗೆ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ಬರುತ್ತಿದ್ದ 170 ರೂಪಾಯಿ ಹಣ ಕಳೆದ ಅಕ್ಟೋಬರ್ ತಿಂಗಳಿನಿಂದ ಪಾವತಿಯಾಗಿಲ್ಲ.
5 ಕೆಜಿ ಅಕ್ಕಿ ಬದಲಾಗಿ ಸರ್ಕಾರ ಫಲಾನುಭವಿಗಳ ಖಾತೆಗೆ 170 ರೂಪಾಯಿ ಪಾವತಿಸುತ್ತಿತ್ತು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಭರವಸೆಗಳಲ್ಲಿ ಅನ್ನಭಾಗ್ಯ ಕೂಡ ಒಂದಾಗಿದ್ದು, 2023 ರ ರಾಜ್ಯ ವಿಧಾನಸಭಾ ಚುನಾವಣೆಗೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗೆ ನೀಡುವುದಾಗಿ ಘೋಷಿಸಿದ್ದರು, ಆದರೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಿತರಿಸಬೇಕಾದ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ಸರ್ಕಾರವು ಎಲ್ಲಾ ಕಾರ್ಡ್ ಹೊಂದಿರುವವರಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿ ನಗದು ನೀಡಲು ನಿರ್ಧರಿಸಿತು.
ಚಿತ್ರದುರ್ಗ ನಗರದ ಉಪ್ಪುನೀರು ಬಾವಿ ಪ್ರದೇಶದ ಬಿಪಿಎಲ್ ಫಲಾನುಭವಿ ಸುಶೀಲಮ್ಮ, ಅಕ್ಟೋಬರ್ ತಿಂಗಳಿನಿಂದ ನನ್ನ ಖಾತೆಗೆ ಹಣ ಬಂದಿಲ್ಲ. ಸರ್ಕಾರವು ತಕ್ಷಣವೇ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿ ಕೆಜಿಗೆ 34 ರೂಪಾಯಿಗಳನ್ನು ಖಾತರಿಪಡಿಸಿದ ರಾಜ್ಯ ಸರ್ಕಾರವು ಸೆಪ್ಟೆಂಬರ್ ವರೆಗೆ ನೀಡುತ್ತಾ ಬಂದಿತ್ತು. ಆದರೆ ಈಗ ನಿಂತುಹೋಗಿದೆ, ಇದಲ್ಲದೆ, ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅವರ ಖಾತೆಗೆ 2,000 ರೂಪಾಯಿಗಳನ್ನು ಜಮಾ ಮಾಡಲಾಗಿಲ್ಲ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, "ಸೆಪ್ಟೆಂಬರ್ ರವರೆಗೆ 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಬಿಪಿಎಲ್ ಫಲಾನುಭವಿಗೆ 170 ರೂ.ಗಳನ್ನು ಪಾವತಿಸಲು ನಾವು ಅನುಮತಿ ನೀಡಿದ್ದೇವೆ. ಅಕ್ಟೋಬರ್ ತಿಂಗಳ ಪಾವತಿಯನ್ನು ಒಂದೆರಡು ದಿನಗಳಲ್ಲಿ ಮಾಡಲಾಗುತ್ತದೆ ಎಂದರು. ಅನುದಾನ ಬಿಡುಗಡೆಯಾದ ತಕ್ಷಣ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಮಧ್ಯೆ, ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ, "ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಆದ್ದರಿಂದ ಅವರು ತಮ್ಮ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ, ಅನ್ನಭಾಗ್ಯ ಯೋಜನೆಯ ಹಣ ಮತ್ತು ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿಲ್ಲ. ರಾಜ್ಯದ ಜನತೆ ಈಗ ಕಾಂಗ್ರೆಸ್ ಆಡಳಿತದ ನಿಜವಾದ ಮುಖವನ್ನು ನೋಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರವು ಪ್ರತಿ ಕೆಜಿಗೆ 22.50 ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡಲು ಮುಂದಾದರೂ, ವೇರಿಯಬಲ್ ವೆಚ್ಚಗಳು (ಎತ್ತುವುದು, ಸಾಗಣೆ, ಸಾಗಣೆ ಮಾಡುವಾಗ ಹಾನಿಯಾಗುವಿಕೆ, ರಾಶಿ ಹಾಕುವುದು ಮತ್ತು ನಂತರ ಮರುಹಂಚಿಕೆ) ಹೆಚ್ಚಾಗಿರುತ್ತವೆ. 34 ರೂಪಾಯಿಗಳನ್ನು ಕೆಜಿಗೆ ನೀಡುವ ಆಯ್ಕೆಯು ಉತ್ತಮವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದಲ್ಲದೆ, ಹೆಚ್ಚುವರಿಯಾಗಿ 5 ಕೆಜಿ ನೀಡಿದರೆ, ಅದು ಪಿಡಿಎಸ್ ಅಕ್ಕಿ ವಿತರಣೆಯಲ್ಲಿ ಕಪ್ಪು ಮಾರುಕಟ್ಟೆ ಮತ್ತು ಇತರ ಅನ್ಯಾಯದ ವ್ಯಾಪಾರ ಪದ್ಧತಿಗಳಿಗೆ ಕಾರಣವಾಗಬಹುದು ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಇತ್ತೀಚೆಗೆ ಕರ್ನಾಟಕ ಸರ್ಕಾರಕ್ಕೆ ಕೆಜಿಗೆ 22.50 ರೂ. ದರದಲ್ಲಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಮುಂದಾಗಿತ್ತು ಎಂದರು, ಇದರಿಂದಾಗಿ ರಾಜ್ಯ ಸರ್ಕಾರ ಹಣದ ಬದಲು ಅಕ್ಕಿ ವಿತರಿಸಲು ಸಾಧ್ಯವಾಗುತ್ತದೆ. ಕಾರ್ಡ್ ಹೊಂದಿರುವವರಿಗೆ ಅಕ್ಕಿ ನೀಡುವ ಮೂಲಕ ರಾಜ್ಯ ಸರ್ಕಾರ ಮಾಸಿಕ 190 ಕೋಟಿ ರೂ. ಮತ್ತು ವಾರ್ಷಿಕ 2,280 ಕೋಟಿ ರೂ. ಉಳಿಸಬಹುದು ಎಂದರು.
ಹೆಚ್ಚುವರಿ ಅಕ್ಕಿಯನ್ನು ಪೂರೈಸುವಂತೆ ಕೋರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಕೇಂದ್ರವನ್ನು ಸಂಪರ್ಕಿಸಿದ್ದರು. ನಂತರ ಬರಗಾಲದಿಂದಾಗಿ ಅಕ್ಕಿಯ ಕೊರತೆ ಇತ್ತು. ಅಕ್ಕಿಯ ಬೆಲೆ 34 ರೂಪಾಯಿ ಇತ್ತು. ನಂತರ ಅದು ಕೆಜಿಗೆ 28 ರೂ.ಗೆ ಇಳಿಯಿತು. ಈಗ, ಕೇಂದ್ರದಲ್ಲಿ ಸಾಕಷ್ಟು ಸಂಗ್ರಹವಿದೆ. ಸಾರಿಗೆ ಶುಲ್ಕ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಕೆಜಿಗೆ 22.50 ರೂ.ಗೆ ಅಕ್ಕಿ ನೀಡಲು ನಾವು ಸಿದ್ಧರಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.