ಬೆಂಗಳೂರು: 2025ರ ಏರೋ ಇಂಡಿಯಾ ನಾಲ್ಕನೇ ದಿನದ ಪ್ರದರ್ಶನ ಬೆಂಗಳೂರನ್ನು ಅಕ್ಷರಶಃ ಸ್ತಬ್ಧಗೊಳಿಸಿತು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಳ್ಳಾರಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು, ಸುಮಾರು ನಾಲ್ಕು ಕಿಲೋಮೀಟರ್ ಉದ್ದದವರೆಗೂ ಸಾವಿರಾರು ವಾಹನಗಳು ಸಿಕ್ಕಿಹಾಕಿಕೊಂಡವು.
ಸಿಟಿ ಟ್ರಾಫಿಕ್ ಪೊಲೀಸರು ದಿನದ ಆರಂಭದಲ್ಲಿಯೇ ಸಲಹೆಗಳನ್ನು ನೀಡಿದರು, ಟ್ರಾಫಿಕ್ ಜಾಮ್ ತಪ್ಪಿಸಲು ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿತ್ತು. ಈ ಪ್ರಯತ್ನಗಳ ಹೊರತಾಗಿಯೂ, ಮುಖ್ಯ ಮತ್ತು ಸರ್ವಿಸ್ ರಸ್ತೆಗಳೆರಡರಲ್ಲೂ ಅಪಾರ ಪ್ರಮಾಣದ ದಟ್ಟಣೆ ಉಂಟಾಗಿತ್ತು. ಅನೇಕ ಪ್ರಯಾಣಿಕರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡರು.
ಏರ್ ಶೋ ವೀಕ್ಷಿಸಲು ಟಿಕೆಟ್ ಖರೀದಿಸಿದ ಹಲವಾರು ಜನರು ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದ ನಂತರ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹತಾಶೆ ವ್ಯಕ್ತಪಡಿಸಿದರು. ಕೆಲವರು ಟಿಕೆಟ್ ಮರುಪಾವತಿಗೆ ಒತ್ತಾಯಿಸಿದರು, ಕಳಪೆ ಟ್ರಾಫಿಕ್ ನಿರ್ವಹಣೆಗೆ ಆಕ್ರೋಶ ವ್ಯಕ್ತ ಪಡಿಸಿದರು.
ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ 44 (ಬೆಂಗಳೂರು-ಬಳ್ಳಾರಿ ರಸ್ತೆ) ತಪ್ಪಿಸಿ ಹೆಬ್ಬಾಳ, ಹೆಣ್ಣೂರು, ಬಾಗಲೂರು ಮತ್ತು ವಿಮಾನ ನಿಲ್ದಾಣದ ದಕ್ಷಿಣ ಗೇಟ್ ಮೂಲಕ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಅಡ್ವೈಸರಿ ಎಚ್ಚರಿಕೆ ನೀಡಿದೆ. ಆದಾಗ್ಯೂ, ಸಂಚಾರವು ಆಮೆಗತಿಯಲ್ಲಿತ್ತು, ಕೆಲವು ಪ್ರಯಾಣಿಕರು ಕೇವಲ ಒಂದು ಕಿಲೋಮೀಟರ್ ದೂರ ಕ್ರಮಿಸಲು ಸುಮಾರು ಒಂದು ಗಂಟೆ ತೆಗೆದುಕೊಂಡರು.
ಟ್ರಾಫಿಕ್ ಜಾಮ್‌ನಿಂದಾಗಿ ತನ್ನ ಮಾವನನ್ನು ಕೊನೆಯ ಬಾರಿಗೆ ನೋಡಲು ಸಮಯಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಒಬ್ಬ X ಬಳಕೆದಾರರು ತಮ್ಮ ಹತಾಶೆಯನ್ನು ಹೊರಹಾಕಿದರು.
ಪ್ರಯಾಣಿಕರು ಪರ್ಯಾಯ ಮಾರ್ಗ ಬಳಸಿ ನಿಲ್ದಾಣ ತಲುಪುವಂತೆ ವಿಮಾನ ನಿಲ್ದಾಣವು ಸಲಹೆ ನೀಡಿತು. ಕಾರ್ಯಕ್ರಮ ವೀಕ್ಷಿಸಲು ಉತ್ಸುಕರಾಗಿದ್ದ ಜೆ.ಪಿ.ನಗರದ ಮತ್ತೊಬ್ಬ ವ್ಯಕ್ತಿ ನಿಗದಿತ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗದೆ ಸಮೀಪದ ಸ್ಕೈವಾಕ್‌ನಿಂದ ವೈಮಾನಿಕ ಪ್ರದರ್ಶನ ನೋಡಿ ತೃಪ್ತಿ ಪಟ್ಟುಕೊಂಡರು.