ವಿಜಯನಗರ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ದೈವವಾಣಿ ಕಾರ್ಣಿಕರ ನುಡಿ ಹೊರಬಿದ್ದಿದ್ದು, ‘ತುಂಬಿದಕೊಡ ತುಳುಕೀತಲೇ ಪರಾಕ್’ ಎಂದು ಕಾರ್ಣಿಕ ನುಡಿದಿದೆ.
ಹೌದು.. ಲಕ್ಷಾಂತರ ಭಕ್ತರು ಎದುರು ನೋಡುವ ರಾಜ್ಯದ ಭವಿಷ್ಯವಾಣಿ ಎಂದೇ ಪರಿಗಣಿಸುವ ಮೈಲಾರಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದ್ದು, ಗೊರವಯ್ಯ ರಾಮಪ್ಪಜ್ಜ" ತುಂಬಿದ ಕೊಡ ತುಳುಕಿತಲೇ ಪರಾಕ್" ಎಂದು ಭವಿಷ್ಯ ನುಡಿದಿದ್ದಾರೆ.
ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ರಾಜ್ಯ-ಹೊರ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಅನುರಣಿಸಿತು.
ಕಳೆದ 11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಪ್ಪ ರಾಮಪ್ಪ ಅವರನ್ನು ಡೆಂಕನಮರಡಿಯ ಸಿಂಹಾಸನ ಕಟ್ಟೆಯಿಂದ ಕಾರ್ಣಿಕದ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇಗುಲದ ವಂಶಪಾರಂಪರ್ಯ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್, ಅಶ್ವಾರೂಢರಾಗಿ ಡೆಂಕನಮರಡಿಗೆ ಬರುತ್ತಿದ್ದಂತೆಯೇ ‘ಏಳು ಕೋಟಿ ಏಳು ಕೋಟಿಗೋ… ಛಾಂಗ್‌ಬಲೋ…’ ಎಂಬ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಭಂಡಾರದ ಆಶೀರ್ವಾದ ಪಡೆದ ಗೊರವಪ್ಪ ರಾಮಪ್ಪ, ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾಗಿರುವ 15 ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲ ಕ್ಷ ಣ ಆಕಾಶದತ್ತ ಶೂನ್ಯವನ್ನು ದಿಟ್ಟಿಸಿ ‘ಸದ್ದಲೇ…’ ಎಂದಾಗ ಇಡೀ ಭಕ್ತ ಸಮೂಹದಲ್ಲಿ ನಿಶಬ್ದ ವಾತಾವರಣ ಮೂಡಿತು. ಈ ಸಂದರ್ಭದಲ್ಲಿ ‘ತುಂಬಿದಕೊಡ ತುಳುಕೀತಲೇ ಪರಾಕ್’ ಎಂಬ ದೈವವಾಣಿ (ಕಾರ್ಣಿಕ) ನುಡಿದ ಗೊರವಪ್ಪನವರು ಕೆಳಕ್ಕೆ ಬಿದ್ದರು.
ಕಾರ್ಣಿಕದ ಅರ್ಥವೇನು?
ಎಲ್ಲ ಜಾತ್ರೆಗಳಲ್ಲೂ ರಥೋತ್ಸವ ನಡೆದರೆ, ಇಲ್ಲಿ ಅದು ನಡೆಯುವುದಿಲ್ಲ. ಬದಲಿಗೆ 11 ದಿನಗಳ ಉಪವಾಸ ಇರುವ ಗೊರವಯ್ಯ 18 ಅಡಿ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ. ಇದನ್ನು ವರ್ಷದ ಭವಿಷ್ಯವಾಣಿ ಎಂದೇ ಪರಿಗಣಿಸಲಾಗುತ್ತದೆ.
ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಸಂಜೆ 5.30ಕ್ಕೆ ಬಿಲ್ಲನೇರಿದ ಗೊರವಯ್ಯ ರಾಮಪ್ಪಜ್ಜ 'ತುಂಬಿದ ಕೊಡ ತುಳುಕೀತಲೇ ಪರಾಕ್' ಎಂದು ನುಡಿದು ಕೆಳಗೆ ಧುಮುಕಿದರು. ಇದು ಶುಭ ಸೂಚಕ ಎಂದು ಹೇಳಲಾಗುತ್ತಿದೆ. ದೈವವಾಣಿಯ ಬಗ್ಗೆ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದು, ಪ್ರಸಕ್ತ ವರ್ಷ ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿ ಎಂದು ವಿಶ್ನೇಷಿಸಿದ್ದಾರೆ.
ಜಾತ್ರೆ ಹಿನ್ನೆಲೆಯಲ್ಲಿ ಫೆಬ್ರವರಿ 4ರಿಂದಲೇ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಹಾಲು ಉಕ್ಕಿಸುವುದು, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರತಿದಿನ ಎರಡು ಬಾರಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಕೈಗೊಂಡ ಗೊರವಯ್ಯ ಇಂದು ಕಾರ್ಣಿಕ ನುಡಿದಿದ್ದಾರೆ. ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಈ ವರ್ಷದ ಭವಿಷ್ಯವಾಣಿಗೆ ಸಾಕ್ಷಿಯಾದರು.
ಕಳೆದ ಬಾರಿ ಅಂದರೆ 2024ರಲ್ಲಿ "ಮಳೆ ಬೆಳೆ ಎಲ್ಲಾ ಸಂಪಾದಿತಲೇ ಪರಾಕ್" ಎಂದು ಭವಿಷ್ಯವಾಣಿ ನುಡಿದಿದ್ದು, ಇದರಂತೆಯೇ ಉತ್ತಮ ಮಳೆಯಾಗಿದ್ದು, ಬೆಳೆಯು ಕೂಡ ಚೆನ್ನಾಗಿ ಬಂದಿವೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಈ ಮೂಲಕ ಕಳೆದ ಬಾರಿಯ ಭವಿಷ್ಯ ನಿಜ ಆಗಿದೆ. 2023ರಲ್ಲಿ ಕಾರ್ಣಿಕ "ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್" ಎಂಬ ಕಾರ್ಣಿಕ ಭವಿಷ್ಯವನ್ನು ನುಡಿದಿದ್ದರು.