ಬೆಂಗಳೂರು: 27,000 ಕೋಟಿ ರೂ. ವೆಚ್ಚದ ಬೆಂಗಳೂರು ಬಿಸಿನೆಸ್ ಕಾರಿಡಾರ್(ಹಿಂದೆ ಪೆರಿಫೆರಲ್ ರಿಂಗ್ ರೋಡ್ ಎಂದು ಕರೆಯಲಾಗುತ್ತಿತ್ತು) ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ವೇಗಗೊಳಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಈ ಸಮಸ್ಯೆಯನ್ನು ನಿಭಾಯಿಸಲು ಮತ್ತು ಪರಿಹಾರವನ್ನು ಕಂಡುಹಿಡಿಯಲು ವಿಶೇಷ ಸಮಿತಿಯನ್ನು ರಚಿಸಿದೆ.
ಈ ಸಮಿತಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು, ಬಿಡಿಎ ಆಯುಕ್ತರು ಮತ್ತು ಕಾನೂನು, ಹಣಕಾಸು ಹಾಗೂ ಕಂದಾಯ(ವಿಪತ್ತು ನಿರ್ವಹಣೆ) ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಅದರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
2,560 ಎಕರೆ ಭೂಮಿಯಲ್ಲಿ ಬರಲಿರುವ 73.03 ಕಿ.ಮೀ. ಫೆರಿಫೆರಲ್ ವರ್ತುಲ ರಸ್ತೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 20 ವರ್ಷಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಇದು ತುಮಕೂರು ರಸ್ತೆಯಿಂದ ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯನ್ನು ದಾಟಿ ಹೊಸೂರು ರಸ್ತೆಗೆ ಸಂಪರ್ಕಿಸುತ್ತದೆ. ಆದಾಗ್ಯೂ, ಭೂಮಿ ಕಳೆದುಕೊಳ್ಳುವವರು, ಹೆಚ್ಚಾಗಿ ರೈತರಾಗಿದ್ದು, ಬಿಡಿಎ ಪ್ರಸ್ತಾಪಿಸಿದ ಪ್ಯಾಕೇಜ್‌ಗಿಂತ ಹೆಚ್ಚಿನ ಪರಿಹಾರವನ್ನು(ಮಾರುಕಟ್ಟೆ ಮೌಲ್ಯ) ಕೇಳುತ್ತಿದ್ದಾರೆ. ಇದು ಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಿದೆ.
ಹೊಸ ಸಮಿತಿಯು ಬಿಡಿಎಯೊಳಗಿನ ಆಂತರಿಕ ಸಮಿತಿಯ ಮೇಲ್ವಿಚಾರಣೆ ಮಾಡುತ್ತದೆ. ಇದತ್ತೆ ಬಿಬಿಸಿಯನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಮಾತ್ರ ವಹಿಸಲಾಗಿದೆ. ಇದು ಬಿಡಿಎಯಲ್ಲಿ ಭೂಸ್ವಾಧೀನದ ಉಪ ಆಯುಕ್ತರ ನೇತೃತ್ವದಲ್ಲಿದ್ದು, ಕಾರ್ಯನಿರ್ವಾಹಕ ಎಂಜಿನಿಯರ್, ವಿಶೇಷ ಭೂಸ್ವಾಧೀನ ಅಧಿಕಾರಿ, ತಹಶೀಲ್ದಾರ್ ಮತ್ತು ಜಿಲ್ಲಾ ನೋಂದಣಿದಾರರನ್ನು ತಂಡದಲ್ಲಿ ಹೊಂದಿದೆ.
ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಈ ವಿಷಯದ ಬಗ್ಗೆ ಬಿಡಿಎ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈತರೊಂದಿಗೆ ಮರು ಮಾತುಕತೆ ನಡೆಸುವಂತೆ ಭೂಸ್ವಾಧೀನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.