ಸಿಎಂ ಸಿದ್ದರಾಮಯ್ಯ 
ರಾಜ್ಯ

Muda ಹಗರಣ: ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್, 11,000 ಪುಟಗಳ ತನಿಖಾ ವರದಿ ಕೋರ್ಟ್'ಗೆ ಸಲ್ಲಿಕೆ

82ನೇ ಸಿಟಿ ಸಿವಿಲ್ ಕೋರ್ಟ್ ನ ನ್ಯಾ.ಸಂತೋಷ್ ಗಜಾನನ ಭಟ್ ಅವರ ಮುಂದೆ 11,000 ಸಾವಿರ ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.

ಬೆಂಗಳೂರು: ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ನೀಡಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.

ತನಿಖಾಧಿಕಾರಿ ಎಸ್‌ಪಿ ಉದೇಶ್ ಅವರು, ಇಂದು ಬೆಳಗ್ಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

82ನೇ ಸಿಟಿ ಸಿವಿಲ್ ಕೋರ್ಟ್ ನ ನ್ಯಾ.ಸಂತೋಷ್ ಗಜಾನನ ಭಟ್ ಅವರ ಮುಂದೆ 11, 000 ಸಾವಿರ ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.

50 ಜನರ ಹೇಳಿಕೆಗಳನ್ನು ದಾಖಲು ಮಾಡಿದ ಪೊಲೀಸರು, 27 ಸಂಪುಟ, 11,000 ಪುಟಗಳ ತನಿಖಾ ವರದಿಯನ್ನು ಬಿ ರಿಪೋರ್ಟ್‌ ಎಂದೇ ಉಲ್ಲೇಖಿಸಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪೊಲೀಸರು 50ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಸದ್ಯ ಅಂತಿಮ ವರದಿ ಸಲ್ಲಿಕೆಯಾದರೂ ಪ್ರಕರಣದ ತನಿಖೆ ಮುಂದುವರೆಯಲಿದೆ. ಕ್ಲೀನ್ ಚಿಟ್ ನೀಡಿದ ನಾಲ್ವರನ್ನು ಹೊರತುಪಡಿಸಿ ಉಳಿದವರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ.

ದೂರುದಾರ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನಲ್ಲಿ ಯಾವುದೇ ಸಾಕ್ಷ್ಯವಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಸಾಕ್ಷ್ಯಾಧಾರಗಳ ಕೊರೆತೆ ಎಂದು ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಇದರಿಂದ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ವಿರುದ್ಧ ಕೆಂಡಾಮಂಡಲಗೊಂಡಿದ್ದಾರೆ.

ಮೊದಲಿನಿಂದಲೂ ಈ ಪ್ರಕರಣದ ಸರಿಯಾಗಿ ತನಿಖೆ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದೆ, ಈಗ ಸಾಕ್ಷ್ಯಾಧಾರಗಳ ಕೊರತೆ ಎಂದು ಬಿ ರಿಪೋರ್ಟ್ ಹಾಕಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ದಾಖಲೆಗಳಿದ್ದರೂ ಸಾಕ್ಷ್ಯಾಧಾರಗಳ ಕೊರತೆ ಎಂದು ಹೇಳುತ್ತಿರುವುದು ಸರಿಯಲ್ಲ. 10ನೇ ತರಗತಿ ಪಾಸಾದ ನನಗೆ ಕಾನೂನಿನ ಅರಿವಿರುವಷ್ಟು ಲೋಕಾಯುಕ್ತ ಅಧಿಕಾರಿಗಳಿಗೆ ಇಲ್ಲವೇ? ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬವನ್ನು ರಕ್ಷಿಸಲು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಗಿಯುವ ಮುನ್ನವೇ ವರದಿ ಸಲ್ಲಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಈ ಪ್ರಕರಣದ ಪ್ರಾರಂಭದಲ್ಲೇ ನಾನು ಹೇಳಿದ್ದೆ. ಬಿಜೆಪಿ ಹಾಗೂ ಜೆಡಿಎಸ್​​ನವರು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿದಾಗಲೇ, ನಾನು ಏನು ಹೇಳಬೇಕೋ ಹೇಳಿದ್ದೆ. ಇದು ರಾಜಕೀಯ ಪ್ರೇರಿತ ಆರೋಪ. ಯಾವ ದಾಖಲೆಯಲ್ಲೂ ಸಿದ್ದರಾಮಯ್ಯ ಅವರ ಸಹಿ ಇಲ್ಲದಿರುವಾಗ, ಸಂಬಂಧವೇ ಇಲ್ಲದಿರುವಾಗ ಅವರ ಪಾತ್ರ ಹೇಗೆ ಬರುತ್ತದೆ? ಆಸ್ತಿ ಕಳೆದುಕೊಂಡವರು ಪರಿಹಾರ ಕೇಳುವುದು ಸಹಜ. ನಾವು ನೀವು ಕೂಡ ಕೇಳುತ್ತೇವೆ. ಮುಡಾದವರು ಕೊಟ್ಟಿದ್ದಾರೆ. ನಮಗೆ ಇಂತಹದೇ ಜಾಗದಲ್ಲಿ ನಿವೇಶನ ನೀಡಿ ಎಂದು ಅವರು ಎಲ್ಲಿಯೂ ಕೇಳಿಲ್ಲ ಎಂದು ಸಮರ್ಥಿಸಿಕೊಂಡರು.

ಆದರೂ ಅನಗತ್ಯ ಗೊಂದಲ ಬೇಡ ಎಂದು ಅವರು ಈ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಯಾವುದೇ ಪ್ರಕರಣ ದಾಖಲಿಸುವಾಗ ಅದಕ್ಕೆ ಪೂರಕವಾದ ದಾಖಲೆ ಬೇಕು. ಲೋಕಾಯುಕ್ತ ಸಂಸ್ಥೆ ತನ್ನ ಕರ್ತವ್ಯ ಮಾಡಿದೆ. ಬಿಜೆಪಿಯವರು ತಮ್ಮ ಹೋರಾಟ ಮಾಡಿಕೊಳ್ಳಲಿ. ದೆಹಲಿಯಿಂದ ವಕೀಲರನ್ನು ಕರೆಸಿ ವಾದ ಮಂಡಿಸಲು ನಮಗೆ ಗೊತ್ತಿಲ್ಲವೇ? ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕುತಂತ್ರ. ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ತೀರ್ಪು ಏನಿದೆ ಗೊತ್ತಿದೆಯೇ?. ಸ್ಥಳೀಯ ಮಟ್ಟದ ಯಾವುದೇ ಸಂಸ್ಥೆಗಳನ್ನು ದುರ್ಬಲಗೊಳಿಸಬಾರದು ಎಂಬ ನಿರ್ದೇಶನವಿದೆ. ಇನ್ನು ಹೈಕೋರ್ಟ್ ಕೂಡ ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಎಂದು ಹೇಳಿದೆ. ಅವರವರು ಅವರ ಕೆಲಸ ಮಾಡುತ್ತಿದ್ದಾರೆ. ಯಾರೇ ಸಿಎಂ ಆಗಿರಲಿ, ಬೊಮ್ಮಾಯಿ ಸಿಎಂ ಆಗಿರಲಿ, ಮುಖ್ಯಮಂತ್ರಿ ಹೇಳಿದಂತೆ ಲೋಕಾಯುಕ್ತ ಪೊಲೀಸರು ಕೇಳುತ್ತಾರಾ?. ಇಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪವಿಲ್ಲ. ಇಲ್ಲಿ ಯಾವುದೇ ಅಧಿಕಾರಿ ನೇಮಿಸಬೇಕಾದರೂ ಲೋಕಾಯುಕ್ತರ ಅನುಮತಿ ಮೇರೆಗೆ ಕೆಲಸ ಮಾಡಲಾಗುವುದು. ಇಲ್ಲಿ ಕರ್ನಾಟಕದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೇ ಹೊರತು, ಹೊರ ರಾಜ್ಯದವರನ್ನು ಆಯ್ಕೆ ಮಾಡಲು ಬರುವುದಿಲ್ಲ ಎಂದು ತಿಳಿಸಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಾತನಾಡಿ, ಮುಡಾ ಕೇಸ್‌ನಲ್ಲಿ ಸಿಎಂ ಪಾತ್ರ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಿಎಂ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡಿರುವ ವಿಚಾರದಲ್ಲಿ ಅವರು ಯಾವುದೇ ಪ್ರಭಾವ ಬೀರಿಲ್ಲ. ಎಲ್ಲರಿಗೂ ಕೊಡುವಂತೆ ಸಿಎಂ ಪತ್ನಿ ಅವರಿಗೂ ಬದಲಿ ನಿವೇಶನ ನೀಡಿದ್ದಾರೆ. ಈ ಕೇಸ್‌ನಿಂದ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್‌ ಸಿಕ್ಕಿದೆ. ಈ ಅಕ್ರಮ ನಡೆದಿರುವುದು ಬಿಜೆಪಿ ಅವಧಿಯಲ್ಲಿ. ಈಗ ಇದರ ಹೊಣೆ ಬಿಜೆಪಿ-ಜೆಡಿಎಸ್‌ನವರು ಹೊರಬೇಕು ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ಈ ಸಂಸ್ಥೆಯ ಮೇಲೆಯೇ ಬಿಜೆಪಿ ನಂಬಿಕೆ ಇಲ್ಲ ಎಂದು ಹೇಳಿದರೆ ಅಷ್ಟು ಸರಿ? ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿದರೆ ನಾವೇನು ಮಾಡಬೇಕು? ಮರಣದಂಡನೆ ವಿಧಿಸಬೇಕೆ? ಸರಿಯಾದ ದಾಖಲೆಗಳನ್ನು ನೀಡಿ, ಪ್ರತಿಭಟನೆ ನಡೆಸಲಿ ಎಂದು ಹೇಳಿದರು.

ಮೈಸೂರಿನ ದೇವನೂರು ಬಡಾವಣೆಯಲ್ಲಿ ದೇವನೂರು 3ನೆ ಹಂತದ ಬಡಾವಣೆ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಂಡಿದೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿಗೆ ಸೇರಿದ ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ರೂ. ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ.

ಅದರಲ್ಲಿ ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಆ ಸಂಬಂಧ ತನಿಖೆ, ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವಂತೆ ಸ್ನೇಹಮಯಿ ಕೃಷ್ಣ ಸೇರಿ ಮೂವರು ಸಾಮಾಜಿಕ ಕಾರ್ಯಕರ್ತರು 2024ರ ಜೂನ್‍ನಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ರಾಜ್ಯಪಾಲರು ಪ್ರಕರಣದ ತನಿಖೆ, ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿ ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯನ್ನು ಸೆ.24ರಂದು ಹೈಕೋರ್ಟ್ ತಿರಸ್ಕರಿಸಿತ್ತು. ಆ ಆದೇಶ ಹೊರಬಿದ್ದ ಬೆನ್ನಲ್ಲೇ ಮುಡಾ ಪ್ರಕರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಎಫ್‍ಐಆರ್ ದಾಖಲಾದ ದಿನವೇ ಅಂದರೆ ಸೆ.27ರಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಹ ಸಲ್ಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT