ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖಾ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ತನಿಖಾಧಿಕಾರಿ ಎಸ್‌ಪಿ ಉದೇಶ್, ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ. 82ನೇ ಸಿಟಿ ಸಿವಿಲ್ ಕೋರ್ಟ್ ನ ನ್ಯಾ.ಸಂತೋಷ್ ಗಜಾನನ ಭಟ್ ಅವರ ಮುಂದೆ 11, 000 ಸಾವಿರ ಪುಟಗಳ ವರದಿಯನ್ನು ಸಲ್ಲಿಸಲಾಗಿದೆ. ಸದ್ಯ ಅಂತಿಮ ವರದಿ ಸಲ್ಲಿಕೆಯಾದರೂ ಪ್ರಕರಣದ ತನಿಖೆ ಮುಂದುವರೆಯಲಿದೆ. ಕ್ಲೀನ್ ಚಿಟ್ ನೀಡಿದ ನಾಲ್ವರನ್ನು ಹೊರತುಪಡಿಸಿ ಉಳಿದವರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ.
ಈ ವರ್ಷ ಮಾರ್ಚ್ ನಿಂದ ಮೇ ವರೆಗೆ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಮುಂಗಾರು ಋತು, ಕೃಷಿ, ಕುಡಿಯುವ ನೀರು ಸರಬರಾಜು, ಹವಾಮಾನ ಪರಿಸ್ಥಿತಿಗಳು ಮತ್ತು ಜಲಾಶಯದ ನೀರಿನ ಮಟ್ಟಗಳ ಕುರಿತು ನಡೆದ ಸಂಪುಟ ಉಪಸಮಿತಿ ಸಭೆ ಬಳಿಕ ಮಾತನಾಡಿರುವ ಸಚಿವರು, ಈ ಬಾರಿ ಈಶಾನ್ಯ ಮುಂಗಾರು ಶೇ. 50 ರಷ್ಟು ಕೊರತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. "ಕರ್ನಾಟಕದ 14 ಪ್ರಮುಖ ಜಲಾಶಯಗಳು ಪ್ರಸ್ತುತ 535.21 ಟಿಎಂಸಿ ನೀರನ್ನು ಹೊಂದಿದ್ದು, ಇದು ಸರಾಸರಿ ಸಂಗ್ರಹದ ಸುಮಾರು 60 ಪ್ರತಿಶತದಷ್ಟಿದೆ. ಕಳೆದ ವರ್ಷ, ಅದೇ ಸಮಯದಲ್ಲಿ, ಸಂಗ್ರಹವು 332.52 ಟಿಎಂಸಿ ಆಗಿತ್ತು" ಎಂದು ಕಂದಾಯ ಇಲಾಖೆ ತಿಳಿಸಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು 2-3 ವರ್ಷಗಳಲ್ಲಿ ಸರಿಪಡಿಸಲು ದೇವರೇ ಭೂಮಿಗಿಳಿದು ಬಂದರೂ ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. BrandBengaluru ಅಡಿಯಲ್ಲಿ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ 'ನಮ್ಮ ರಸ್ತೆ' ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ಟ್ರಾಫಿಕ್ ಸಮಸ್ಯೆ ಕುರಿತು ಮಾತನಾಡಿದರು. ''ಪ್ರತಿನಿತ್ಯ ನಗರದಲ್ಲಿ ಲಕ್ಷ ಲಕ್ಷ ವಾಹನಗಳು ನೋಂದಣಿಯಾಗುತ್ತಿವೆ. ಇಷ್ಟು ಪ್ರಮಾಣದ ವಾಹನಗಳು ರಸ್ತೆಗಳಿಯುತ್ತಿದ್ದರೆ, ಮೇಲಿರುವ ಭಗವಂತನೇ ಭೂಮಿಗಿಳಿದು ಬಂದರೂ 1, 2 ಅಥವಾ 3 ವರ್ಷಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಏನೂ ಮಾಡಲಾಗುವುದಿಲ್ಲ. ಅಂತಹ ಕಷ್ಟ ಇದೆ ಎಂದರು.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ನಡೆದಿದ್ದ ಪ್ರಕರಣದ ಸಂಬಂಧ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಫ್ತಿ ಮುಸ್ತಾಕ್ ಬಂಧಿತ ಆರೋಪಿಯಾಗಿದ್ದು, ಘಟನೆ ನಡೆದು 11 ದಿನಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಮೌಲ್ವಿಯ ವಿಡಿಯೋವೊಂದು ವೈರಲ್ ಆಗಿತ್ತು. ಗಲಭೆಗೆ ಈ ಪ್ರಚೋದನಾಕಾರಿ ಭಾಷಣವೇ ಕಾರಣ ಎಂಬ ಆರೋಪವಿದ್ದ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರನ್ನು ಟೀಕಿಸಲು ಸೋಷಿಯಲ್ ಮಿಡೀಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದ ಪೋಸ್ಟ್ ಮುಸ್ಲಿಂ ಸಮುದಾಯವನ್ನು ಕೆರಳಿಸಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ಸಿದ್ದೇನಾಯಕನಹಳ್ಳಿ ರೈಲ್ವೆ ಹಳಿ ಬಳಿ ರೈಲು ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಉತ್ತರ ಪ್ರದೇಶ ಮೂಲದ 18 ವರ್ಷದ ರಾಹುಲ್, 20 ವರ್ಷದ ಬಿಕೇಶ್ ಮತ್ತು 24 ವರ್ಷದ ಲಲನ್ ಎಂದು ಗುರುತಿಸಲಾಗಿದೆ. ಮೂವರು ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ರೈಲ್ವೆ ಹಳಿ ಬಳಿ ಬಂದಿದ್ದರು. ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ಹಿರಿಯ ಐಎಫ್ಎಸ್ ಅಧಿಕಾರಿ ಮೀನಾಕ್ಷಿ ನೇಗಿ ನೇಮಕಗೊಂಡಿದ್ದಾರೆ. 1989ರ ಬ್ಯಾಚ್ನ ಕರ್ನಾಟಕ ಕೇಡರ್ ನ ಐಎಫ್ಎಸ್ ಅಧಿಕಾರಿಯಾಗಿರುವ ಮೀನಾಕ್ಷಿ ನೇಗಿ ಮೂಲತಃ ಉತ್ತರಾಖಂಡದವರಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ದಕ್ಷ ಅಧಿಕಾರಿಯೆಂದು ಹೆಸರು ಮಾಡಿರುವ ಮೀನಾಕ್ಷಿ ನೇಗಿ ಬಳ್ಳಾರಿ, ಚಿಕ್ಕಮಗಳೂರು, ಮಂಡ್ಯದಲ್ಲಿ ಡಿಸಿಎಫ್ ಆಗಿ ಕೆಲಸ ಮಾಡಿದ್ದಾರೆ.