ಬೆಂಗಳೂರು: ಮಾದಕ ವಸ್ತು ಮಾರಾಟಗಾರನೆಂದು ಶಂಕಿಸಿ ಜಗಳ ತೆಗೆದ ವ್ಯಕ್ತಿಯೊಬ್ಬ 40 ವರ್ಷದ ನೈಜೀರಿಯಾ ಪ್ರಜೆಯನ್ನು ಥಳಿಸಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಹಳ್ಳಿಯಲ್ಲಿ ಬುಧವಾರ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಚಿಕನ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಯಾಸಿನ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅಡಿಯಾಕೋ ಮಸಲಿಯೋ ತನ್ನ ಸ್ನೇಹಿತನೊಂದಿಗೆ ಸ್ಥಳೀಯ ಕೋಳಿ ಅಂಗಡಿಗೆ ಬಂದು ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈತ ಡ್ರಗ್ಸ್ ದಂಧೆಕೋರನಾಗಿದ್ದು, ಅಲ್ಲಿಗೆ ಡ್ರಗ್ಸ್ ಇಡಲು ಮತ್ತು ಖರೀದಿದಾರರಿಗೆ ಡ್ರಗ್ಸ್ ನೀಡಲು ಅಲ್ಲಿಗೆ ಬಂದಿದ್ದಾನೆ ಎಂದು ಶಂಕಿಸಿ, ಖಾನ್ ಮತ್ತು ಕೆಲವು ಸ್ಥಳೀಯರು ನೈಜೀರಿಯನ್ ಪ್ರಜೆಯನ್ನು ಪ್ರಶ್ನಿಸಿದ್ದಾರೆ. ಇದು ಜಗಳಕ್ಕೆ ಕಾರಣವಾಗಿದೆ. ಬಳಿಕ ನೈಜೀರಿಯಾದ ವ್ಯಕ್ತಿ ಖಾನ್ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಕೋಳಿ ಅಂಗಡಿಯಿಂದ ಚಾಕು ತಂದು ಇರಿಯುವುದಾಗಿ ಖಾನ್‌ಗೆ ಬೆದರಿಕೆಯೊಡ್ಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಖಾನ್, ನೈಜೀರಿಯಾದ ವ್ಯಕ್ತಿಯ ತಲೆಗೆ ಮರದ ಹಲಗೆಯಿಂದ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತನ ತಲೆಗೆ ತೀವ್ರ ಪೆಟ್ಟಾಗಿದ್ದು, ಕುಸಿದು ಬಿದ್ದಿದ್ದಾನೆ ಎಂದು ಅವರು ಹೇಳಿದರು.
ತನಿಖೆಯ ಸಮಯದಲ್ಲಿ, ನೈಜೀರಿಯನ್ ಪ್ರಜೆ ಬಳಿ ಯಾವುದೇ ಮಾದಕವಸ್ತು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಈ ಹಿಂದೆ ಆತನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.