ಬೆಂಗಳೂರು: ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ 3,011 ಕೋಟಿ ರು. ಟಿಡಿಆರ್ ಪರಿಹಾರ ನೀಡುವುದರಿಂದ ಪಾರಾಗಲು ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ಕಾನೂನು ಹೋರಾಟ ಹೇಗೆ ಮಾಡಬೇಕು ಎಂಬ ಕುರಿತು ಸುಪ್ರೀಂ ಕೋರ್ಟ್ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.
ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ಬರೋಬ್ಬರಿ 3,011 ಕೋಟಿ ರು. ಮೊತ್ತದ ಟಿಡಿಆರ್ ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿತ್ತು.
ಇಷ್ಟು ಮೊತ್ತದ ಪರಿಹಾರ ನೀಡಿದರೆ ಸರ್ಕಾರಕ್ಕೆ ಹೊರೆ ಆಗಲಿದೆ ಎಂಬ ಕಾರಣಕ್ಕೆ ಜ.23ರಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ ರಸ್ತೆ ಅಗಲೀಕರಣ ಪ್ರಸ್ತಾಪವನ್ನೇ ಕೈಬಿಟ್ಟು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ನಿರ್ಣಯವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಟ್ಟಿದ್ದೇವೆ. ಹೀಗಾಗಿ 3,011 ಕೋಟಿ ಟಿಡಿಆರ್ ಪರಿಹಾರ ನೀಡುವುದಿಲ್ಲ ಎಂದು ಹೇಳಿತ್ತು. ಆದರೆ, ಇದನ್ನು ಪುರಸ್ಕರಿಸದ ಸುಪ್ರೀಂ ಕೋರ್ಟ್ 3,011 ಕೋಟಿ ಟಿಡಿಆರ್ ಪರಿಹಾರ ನೀಡುವಂತೆ ನ್ಯಾಯಾಲಯ ಈಗಾಗಲೇ ಆದೇಶ ನೀಡಿದೆ. ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಎರಡು ಕಿ.ಮೀ. ರಸ್ತೆ ಜಾಗಕ್ಕೆ 3,011 ಕೋಟಿ ಮೌಲ್ಯದ ಪರಿಹಾರ ನೀಡುವುದು ನ್ಯಾಯಬದ್ಧವಲ್ಲ. ಹೀಗಾಗಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಡಲು ತೀರ್ಮಾನಿಸಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಮುಂದೆ ಯಾವ ರೀತಿ ಮುಂದುವರೆಯಬೇಕು ಎಂಬ ಕುರಿತು ದೆಹಲಿ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸಿದ್ದೇವೆ ಎಂದು ಹೇಳಿದರು.