ಬೆಂಗಳೂರು: ಮರಾಠಿ ಭಾಷೆ ಮಾತನಾಡದ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ಬೆನ್ನಲ್ಲೇ ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಈ ನಡುವಲ್ಲೇ ಉಭಯ ರಾಜ್ಯಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ಕಂಡಕ್ಟರ್ ಮಹದೇವಪ್ಪ ಹುಕ್ಕೇರಿಯವರನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಸೋಮವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಸ್ಸಿಗೆ ಅವರು ಮಸಿ ಬಳಿಯುವುದು, ಅವರ ಬಸ್ಸಿಗೆ ನಾವು ಮಸಿ ಬಳಿಯುವುದರಲ್ಲಿ ಅರ್ಥವಿಲ್ಲ. ಮಹಾರಾಷ್ಟ್ರದವರು ಇಲ್ಲಿ ಬರಬೇಕು, ನಮ್ಮವರು ಅಲ್ಲಿಗೆ ಹೋಗಬೇಕು. ಮಹಾರಾಷ್ಟ್ರ ಸರ್ಕಾರ, ತಪ್ಪು ಮಾಡಿದವರನ್ನು ಬೆಂಬಲಿಸಬಾರದು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಮಹಾರಾಷ್ಟ್ರಕ್ಕೆ ಹೋಗುವ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿದೆ. ಅವಶ್ಯಕತೆ ಬಿದ್ದರೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಬೆಳಗಾವಿ ಪೊಲೀಸರು ತಮ್ಮ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಕ್ಕೆ ಮಹಾದೇವಪ್ಪ ಅವರು ಅಸಮಾಧಾನಗೊಂಡಿದ್ದಾರೆ. ಪೊಲೀಸರು ಮಹಾದೇವಪ್ಪ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದಾಗ ಕನಿಷ್ಠ 90 ಜನರು ಅಲ್ಲಿದ್ದರು ಎಂದು ತಿಳಿಸಿದ್ದಾರೆ.
ಬಸ್‌ಗಳಿಗೆ ಕಪ್ಪು ಬಣ್ಣ ಬಳಿಯುವಂತಹ ವರ್ತನೆ ಎರಡೂ ರಾಜ್ಯಗಳಿಗೆ ನಷ್ಟವನ್ನುಂಟು ಮಾಡುತ್ತವೆ ಮತ್ತು ಜನರಿಗೆ ಅನಾನುಕೂಲವನ್ನುಂಟು ಮಾಡುತ್ತವೆ, ಶಿವಸೇನೆಯು ಸಣ್ಣ ವಿಷಯಗಳಿಗೆ ಮಹಾರಾಷ್ಟ್ರದ ಜನರನ್ನು ಪ್ರಚೋದಿಸುವುದನ್ನು ನಿಲ್ಲಿಸಹೇತುಯ ಶಾಂತಿ ಮತ್ತು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ನಡುವೆ ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಬೆನ್ನಿಗೆ ರಾಜ್ಯ ಸಚಿವರು ನಿಂತಿದ್ದು, ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿ ಅವರ ವಿರುದ್ಧ ಬೆಳಗಾವಿ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಟೀಕಿಸಿದ್ದಾರೆ.
ಸಚಿವರಾದ ರಾಮಲಿಂಗಾ ರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಮತ್ತು ಶಿವರಾಜ್ ತಂಗಡಗಿ ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ ಅವರು ಮಾತನಾಡಿ, ಪ್ರತಿ ಸಲ ಗಡಿಭಾಗದಲ್ಲಿ ಭಾಷಾ ಆಧಾರದ ಮೇಲೆ ಆಗುವ ಗಲಾಟೆ ವೇಳೆ ಬಹಳ ಎಚ್ಚರಿಕೆಯಿಂದ ಮಹಾರಾಷ್ಟ್ರದವರು ನಡೆದುಕೊಳ್ಳಬೇಕು. ಅದನ್ನು ಹೆಚ್ಚು ಬೆಳೆಯಲು ಬಿಡಬಾರದು. ನಮ್ಮಲ್ಲಿ ಅಂತಹ ಪ್ರಕರಣಗಳು ಆದಾಗ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಹಾರಾಷ್ಟ್ರದವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಬೆಳಗಾವಿ ಪೊಲೀಸರು ಪ್ರಕರಣವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅವರು ಯಾರ ಒತ್ತಡಕ್ಕೆ ಮಣಿದರು ಅಂತಾ ಅವರನ್ನೇ ಕೇಳಿ ಎಂದು ಕಿಡಿಕಾರಿದರು.
ನನ್ನ ಮತ್ತು ಯಾರ ಗಮನಕ್ಕೂ ಅವರು ತಂದಿಲ್ಲ. ನಾನು ಮತ್ತು ಸಹೋದರ ಚನ್ನರಾಜ ಅವರು ಪೊಲೀಸ್ ಕಮಿಷನರ್ ಜೊತೆಗೆ ಅವತ್ತು ರಾತ್ರಿ 11 ಗಂಟೆವರೆಗೆ ಸಂಪರ್ಕದಲ್ಲಿ ಇದ್ದೆವು. ತ್ವರಿತವಾಗಿ ಕ್ರಮ ತೆಗೆದುಕೊಳ್ಳದೇ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದ್ದೆವು . ಹೀಗೆ ಹೇಳಿದಾಗಲೂ ರಾತ್ರೋ ರಾತ್ರಿ 12 ಗಂಟೆಗೆ ಪೋಕ್ಸೋ ಕೇಸ್ ಹಾಕಿದ್ದಾರೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸುತ್ತೇವೆ. ಈ ಪ್ರಕರಣ ಬಗ್ಗೆ ಗೃಹ ಸಚಿವರು ಮತ್ತು ಡಿಜಿ ಅವರ ಜೊತೆಗೂ ಮಾತನಾಡಿದ್ದೇನೆ ಎಂದು ಹೇಳಿದರು.
ಕಂಡಕ್ಟರ್ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ. ನಾವೆಲ್ಲರೂ ಸಹೋದರತ್ವದಿಂದ ಚೆನ್ನಾಗಿದ್ದೇವೆ. ಘಟನೆ ತಿಳಿದ ಐದೇ ನಿಮಿಷಕ್ಕೆ ನಾನು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಕರೆ ಮಾಡಿದ್ದೆ. ಆಗ ಅವರು ಬೆಂಗಳೂರಿನಲ್ಲಿದ್ದರು. ಡಿಸಿಪಿ ರೋಹನ್ ಜಗದೀಶ ಅವರಿಂದ ಮಾಹಿತಿ ಪಡೆದುಕೊಂಡಿದ್ದೆ. ಅಲ್ಲದೇ ಯಾರು ಸರ್ಕಾರಿ ನೌಕರನ ಮೇಲೆ ಕೈ ಮಾಡಿದ್ದಾರೆ ಅವರನ್ನು ತಕ್ಷಣ ಬಂಧಿಸುವಂತೆ ನಿರ್ದೇಶನ ನೀಡಿದ್ದೆ ಎಂದರು.
ಕಂಡಕ್ಟರ್ ಮೇಲಿನ ಪೋಕ್ಸೊ ಕೇಸ್ ತನಿಖೆ ನಡೆಯುತ್ತಿದೆ. ಈಗಾಗಲೇ ಸಾರಿಗೆ ಸಚಿವರು ಹೇಳಿದ್ದಾರೆ. ಬಸ್ನಲ್ಲಿ 90 ಜನ ಪ್ರಯಾಣಿಸುತ್ತಿದ್ದರು. ಆದರೆ, ಈ ರೀತಿ ಪೋಕ್ಸೊ ಕೇಸ್ ಹಾಕಿದ್ದಾರೆ. ಈ ಬಗ್ಗೆ ತನಿಖೆಯಾಗಲಿ, ಸತ್ಯಾಂಶ ಹೊರಗೆ ಬರುತ್ತದೆ. ಕರ್ನಾಟಕ ಮತ್ತು ಬೇರೆ ರಾಜ್ಯ ಬೇರೆ ಅಲ್ಲ. ದೇಶ ಅಂತಾ ಬಂದಾಗ ನಾವೆಲ್ಲರೂ ಒಂದೇ. ಆ ರಾಜ್ಯದ ಜನರು ನಿನ್ನೆ ನಮ್ಮ ಬಸ್ ಚಾಲಕ, ನಿರ್ವಾಹಕರಿಗೆ ಧಮ್ಕಿ ಕೊಡುವುದನ್ನು ಗಮನಿಸಿದ್ದೇನೆ. ನಾವು ನಾವೇ ಹೊಡೆದಾಡುವುದಲ್ಲ. ಎಲ್ಲರೂ ಬಹಳಷ್ಟು ಪ್ರಬುದ್ಧರಾಗಿ ವರ್ತಿಸಬೇಕಾಗುತ್ತದೆ. ಎಲ್ಲರಿಗೂ ಅವರವರ ಭಾಷೆ ಮೇಲೆ ಅಭಿಮಾನ ಇರುತ್ತದೆ. ಹಾಗಾಗಿ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇದೆಲ್ಲಾ ಇಲ್ಲಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಗೃಹ ಲಕ್ಷ್ಮೀ ಹಣ ಕುರಿತು ಮಾತನಾಡಿ, ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ. ತಾಪಂ ಮೂಲಕ ಮಾಡುವುದರಿಂದ ತಡವಾಗಿದೆ. ಯಾವುದೇ ಗೃಹಲಕ್ಷ್ಮೀಯರು ವಿಚಾರ ಮಾಡುವ ಪ್ರಮೇಯ ಇಲ್ಲ. 2 ಸಾವಿರ ರೂ. ಬರುತ್ತದೆ ಅಂತಾ ತಾವು ಏನೇನೋ ಯೋಜನೆ ಹಾಕಿಕೊಂಡಿರುತ್ತಿರಿ. ಹಾಗಾಗಿ, ಬರುವ 8 ದಿನಗಳಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ ಆಗುತ್ತದೆ ಎಂದು ಹೇಳಿದರು.
ಮಾ.3ರಂದು ಬಜೆಟ್ ಅಧಿವೇಶನದಲ್ಲಿ ಭಾಗಿ ಆಗಬೇಕು ಎನ್ನುವ ಆಸೆ ಇದೆ. ನಾಳೆ ಸಿಟಿ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಹೋಗುತ್ತಿದ್ದೇನೆ. ಪ್ರಯಾಣ ಮಾಡಲು ವೈದ್ಯರು ಅನುಮತಿ ನೀಡಿದರೆ ಮತ್ತೆ ಕರ್ತವ್ಯಕ್ಕೆ ಮರಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವರಾಜ್ ತಂಗಡಗಿಯವರು ಮಾತನಾಡಿ, ಪೋಕ್ಸೋ ಪ್ರಕರಣವನ್ನು ಕಂಡಕ್ಟರ್ ವಿರುದ್ಧ ದಾಖಲಿಸಬಾರದಿತ್ತು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಶಾಂತಿ ಕದಡಲು ಪ್ರಯತ್ನಿಸುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕಿ ಉಮಾಶ್ರೀ ಕೂಡ ಆಸ್ಪತ್ರೆಯಲ್ಲಿ ಮಹಾದೇವಪ್ಪ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಕೆಆರ್‌ವಿ ನಾಯಕಿಯ ಮೇಲೆ ದಾಳಿ
ಏತನ್ಮಧ್ಯೆ ಜಂಬೋಟಿಯಲ್ಲಿ ಕನ್ನಡ ಮಾತನಾಡಿದ ಕಾರಣ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ನಾಯಕಿಯ ಮೇಲೆ ಮರಾಠಿ ಮಾತನಾಡುವ ಜನರ ಗುಂಪೊಂದು ಹಲ್ಲೆ ನಡೆಸಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಕನ್ನಡ ಮಾತನಾಡಿದ ಕಾರಣ ದುಷ್ಕರ್ಮಿಗಳು ಇತ್ತೀಚೆಗೆ ತಮ್ಮ ಮೇಲೆ ಮೂರು ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಆ ನಾಯಕಿ ಹೇಳಿಕೆ ನೀಡಿದ್ದಾರೆ.
'ಬೆಳಗಾವಿ ಚಲೋ'ಗೆ ಕರೆ
ಈ ನಡುವೆ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲಿನ ದಾಳಿಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಚಲೋಗೆ ಕರೆ ನೀಡಿದೆ.
ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸುವವರಿಗೆ ಪಾಠ ಕಲಿಸುವ ಸಮಯ ಬಂದಿದೆ. ಕರ್ನಾಟಕದಾದ್ಯಂತದ ಕನ್ನಡಿಗರು ಬೆಳಗಾವಿಗೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆಂದು ಹೇಳಿದ್ದಾರೆ.