ಬೆಂಗಳೂರು: ಸೋಮವಾರ ಹಲವಾರು ಲಿಂಗಾಯತ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಆವರಣದಲ್ಲಿ 12 ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ ಮಠಾಧೀಶರು, ಬಸವಣ್ಣನವರ ಧರ್ಮೋಪದೇಶವನ್ನು ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಕ್ಷರಧಾಮದ ಮಾದರಿಯಲ್ಲಿ ಬೃಹತ್ 'ಶರಣ ದರ್ಶನ' ಕೇಂದ್ರ ಸ್ಥಾಪಿಸಿ, ಅಲ್ಲಿ, ಉದ್ಯಾನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರವು ಅನುಭವ ಮಂಟಪವನ್ನು ನಿರ್ಮಿಸುತ್ತಿರುವ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವಂತೆಯೂ ಅವರು ಒತ್ತಾಯಿಸಿದರು. ಎಲ್ಲಾ ಜಿಲ್ಲೆಗಳಲ್ಲಿ ಬಸವಣ್ಣ ಭವನಗಳನ್ನು ಸ್ಥಾಪಿಸುವುದು, ವಚನಗಳು ಮತ್ತು ಇತರ ಶರಣ ಸಾಹಿತ್ಯದ ಕುರಿತು ಚರ್ಚೆಗಳನ್ನು ಆಯೋಜಿಸುವುದು ಮತ್ತು ಕೈಬರಹದ ವಚನಗಳ ಡಿಜಿಟಲೀಕರಣ ಮಾಡುವಂತೆ ಮನವಿ ಸಲ್ಲಿಸಿದರು.
ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿತರಾಗಿರುವ ವಿಶ್ವಗುರು ಬಸವೇಶ್ವರರ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ನಲ್ಲಿ ರೂ 100 ಕೋಟಿ ನೀಡುವ ಜೊತೆಗೆ, ಮುಂದಿನ ನಾಲ್ಕು ವರ್ಷಗಳ ಬಜೆಟ್ ನಲ್ಲಿ ತಲಾ 100 ಕೋಟಿಯಂತೆ ಒಟ್ಟು ರೂ 500 ಕೋಟಿ ಅನುದಾನ ನೀಡಬೇಕು ಎಂದರು,
ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ನಾನು ಮೊದಲ ಬಾರಿಗೆ ಬಸವ ಜಯಂತಿಯಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೆ. ಬಸವಣ್ಣನನ್ನು ಬಹಿರಂಗವಾಗಿ ವಿರೋಧಿಸಲು ಯಾರಿಗೂ ಸಾಧ್ಯವಿಲ್ಲ ಆದರೆ ರಹಸ್ಯವಾಗಿ ವಿರೋಧಿಸುತ್ತಿದ್ದಾರೆ. ಅವರು ಜಾತಿ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದಾರೆ. ಬಸವಣ್ಣನವರ ಬೋಧನೆಗಳು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳಲ್ಲಿವೆ. ಇವೆಲ್ಲವೂ ನಮ್ಮ ಸಂವಿಧಾನದಲ್ಲಿದೆ” ಎಂದು ಸಿಎಂ ಹೇಳಿದರು.