ಮಂಗಳೂರು: ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮಂಗಳವಾರ ಇಬ್ಬರು ಮಾಸ್ಟರ್ ಮೈಂಡ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಪ್ರಮುಖ ಆರೋಪಿಗಳನ್ನು ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ನಜೀರ್ ಹಾಗೂ ಭಾಸ್ಕರ್ ಬೆಳ್ಚಪಾಡ ಅಲಿಯಾಸ್ ಶಶಿ ಥೇವರ್ ಎಂದು ಗುರುತಿಸಲಾಗಿದೆ.
6 ತಿಂಗಳ ಹಿಂದೆ ಸ್ಥಳೀಯ ನಿವಾಸಿ ಮಹಮ್ಮದ್ ನಜೀರ್ ಜೊತೆ ಸಂಪರ್ಕ ಸಾಧಿಸಿ, ಸಂಚು ರೂಪಿಸಿ ದರೋಡೆ ನಡೆಸಲು ಈ ಇಬ್ಬರು ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು. ಇದೀಗ ಈ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು 12 ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿ ಮತ್ತು ಚಿನ್ನಾಭರಣ ಅಡಗಿಸಿಡಲು ಸಹಕರಿಸಿದ್ದ ಷಣ್ಮುಗಂ ಸುಂದರಂನನ್ನು ಬಂಧಿಸಿದ್ದಾರೆ.
ಜನವರಿ 17ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿರುವ ಸಹಕಾರಿ ಬ್ಯಾಂಕ್ ಗೆ ಹಾಡಹಗಲೇ ನುಗ್ಗಿದ ಖದೀಮರ ಗುಂಪು ಸುಮಾರು 12 ಕೋಟಿ ರೂ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದರು.