ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್ 2 ರಲ್ಲಿ ವಿದೇಶಿ ವ್ಯಕ್ತಿಯೊಬ್ಬ ಸಿಐಎಸ್ಎಫ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಬುಧವಾರ ನಡೆದಿದ್ದು, ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ.
ಆಸ್ಟ್ರೇಲಿಯನ್ ಮತ್ತು ಯುಕೆ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಫಾಯಿಲ್ಸ್ ಎಲಿಯಟ್ ಬ್ಲೇರ್ ಎಂಬ ವಿದೇಶಿಗ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ, ಮಹಿಳೆ ಸೇರಿದಂತೆ ಇತರ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾನೆ.
ಘಟನೆ ಬೆನ್ನಲ್ಲೇ ವಿದೇಶಿಗನ ವಿರುದ್ಧ ಹಲವು ಸೆಕ್ಷನ್ ಗಳ ಅಡಿಯಲ್ಲಿ ವಿಮಾನ ನಿಲ್ದಾಣದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ರಾತ್ರಿ 10.20ಕ್ಕೆ ನಿರ್ಗಮನ ವಲಯದಲ್ಲಿ ಭದ್ರತಾ ತಪಾಸಣೆ ನಡೆಯುತ್ತಿತ್ತು. ಈ ವೇಳೆ ಸರತಿ ಸಾಲಿನಲ್ಲಿ ಬಂದಿದ್ದ ಬ್ಲೇರ್ ಅವರ ಬ್ಯಾಗ್ ಗಳನ್ನೂ ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದ್ದಕ್ಕಿದ್ದಂತೆ ಸಿಬ್ಬಂದಿಗಳ ಮೇಲೆ ಹೌಹಾರಿದ್ದಾನೆ. CISF ಕಾನ್‌ಸ್ಟೆಬಲ್ ರಾಮ್‌ಕುಮಾರ್ ದಲೇರಾ ಅವರನ್ನು ನಿಂದಿಸಿದ್ದಾನೆ.
ಈ ವೇಳೆ ಸಮಾಧಾನಪಡಿಸಲು ಬಂದ ಇತರೆ ಸಿಬ್ಬಂದಿಗಳನ್ನೂ ನಿಂದಿಸಿದ್ದಾನೆ. ಅಲ್ಲದೆ, ಸರತಿ ಸಾಲಿನಲ್ಲಿ ಹಿಂಬದಿ ನಿಂತಿದ್ದ ಮಹಿಳೆ ಹಾಗೂ ಇತರೆ ಪ್ರಯಾಣಿಕರ ಮೇಲೂ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಸಿಐಎಸ್‌ಎಫ್ ಸಬ್-ಇನ್‌ಸ್ಪೆಕ್ಟರ್ ಅರವಿಂದ್ ಕುಮಾರ್ ಮಿಶ್ರಾ ಅವರು ವ್ಯಕ್ತಿಯ ವಿರುದ್ಧ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತನ ವಿರುದ್ಧ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜಾಮೀನು ರಹಿತ ಪ್ರಕರಣ ಕೂಡ ದಾಖಲಾಗಿದೆ. ಆತನಿಗೆ ವಿಮಾನಯಾನಕ್ಕೂ ಅವಕಾಶ ನೀಡಲಾಗಿಲ್ಲ ಎಂದು ಅರವಿಂದ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ವ್ಯಕ್ತಿಯ ವಿರುದ್ಧ ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ), 131 (ದಾಳಿ) 132 (ಸಾರ್ವಜನಿಕ ಸೇವಕನ ಕರ್ತವ್ಯ ತಡೆಯುವುದು), 351 (2) (ಕ್ರಿಮಿನಲ್ ಬೆದರಿಕೆ) 353 (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ) 202 B.3NS ಕಾಯಿದೆ ಅಡಿಯಲ್ಲಿ FIR ದಾಖಲಾಗಿದೆ ಎಂದು ತಿಳಿದುಬಂದಿದೆ.