ಬೆಂಗಳೂರು: ಸಂಗೀತ ವಿದ್ವಾಂಸ, ಬಹುವಾದ್ಯ ಪರಿಣತ ಎಸ್. ಬಾಲಿ ಖ್ಯಾತಿಯ ಎಸ್ ಬಾಲಸುಬ್ರಹ್ಮಣ್ಯಂ ಅವರು ಇಂದು ಗುರುವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಕನ್ನಡದ ಪ್ರಮುಖ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಸ್ ಬಾಲಿ ಅವರು ಮೃದಂಗ, ತಬಲಾ, ಢೋಲಕ್ , ಢೋಲ್ಕಿ, ಖಂಜರಿ, ಕೋಲ್ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸರಾಗಿದ್ದರು.
ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್ ಆಗಿದ್ದಾರೆ. ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಕೆ ಇವರದು.
ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಜನಿಸಿದ್ದರು. ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಬೆಳೆಸಿಕೊಂಡ ಬಾಲಿ ಪಾಲಕ್ಕಾಡು ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಭಾಗಿಯಾಗಿದ್ದಾರೆ.
ಬಾಲಿಯವರು ಶಾಸ್ತ್ರೀಯವಾಗಿ ಕಲಿತದ್ದು ಮೃದಂಗ ಮಾತ್ರ. ಆದರೆ ತಮ್ಮ ಶ್ರದ್ಧೆಯಲ್ಲೇ ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ಹಲವಾರು ವಾದ್ಯಗಳನ್ನು ನುಡಿಸುವ ಪರಿಣತಿಯನ್ನು ಸಾಧಿಸಿದ್ದರು. ಹೀಗೆ ಸಕಲ ಲಯ ವಾದ್ಯಗಳ ನುಡಿಸುವಿಕೆಯಲ್ಲಿ ಪರಿಣತಿ ಪಡೆದಿದ್ದರು.